ಭಾರತವನ್ನು ಒಡೆಯಲು ಬಿಡುವುದಿಲ್ಲ; ಒಂದು ರಾಷ್ಟ್ರಕ್ಕೆ ಒಬ್ಬರೇ ಪ್ರಧಾನಿ ಎಂದ ಪ್ರಧಾನಿ ಮೋದಿ

ಕಥುವಾ: ಜಮ್ಮು-ಕಾಶ್ಮೀರದ ಕಥುವಾದಲ್ಲಿ ಚುನಾವಣೆ ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ಉದ್ಧಟತನಕ್ಕೆ ಭಾರತೀಯ ಸೇನೆ ವೈಮಾನಿಕ ದಾಳಿಯ ಉತ್ತರ ನೀಡಿದೆ ಎಂದು ಹೇಳಿದ್ದಾರೆ.

ಭಾರತಕ್ಕೆ ಬೆದರಿಕೆ ಒಡ್ಡುವ ದಿನಗಳು ಈಗ ಇಲ್ಲ. ಇದು ನವ ಭಾರತ. ಭಯೋತ್ಪಾದಕರನ್ನು ಅವರ ಅಡಗುತಾಣಗಳಿಗೆ ನುಗ್ಗಿ ಹೊಡೆದು ಹಾಕುತ್ತೇವೆ.

ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಲು ಕಾಂಗ್ರೆಸ್‌ ತನ್ನ ಆಡಳಿತ ಅವಧಿಯನ್ನು ಭಾರತೀಯ ಸೇನೆಗೆ ಅಡ್ಡಿ ಪಡಿಸುತ್ತಿತ್ತು. ಭಾರತೀಯ ಸೇನೆಯನ್ನು ಕೇವಲ ಆದಾಯ ವೃದ್ಧಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಉದಾಹರಣೆಗೆ ಭೋಪೋರ್ಸ್‌ ಅಥವಾ ಹೆಲಿಕಾಪ್ಟರ್‌ ಡೀಲ್‌ಗಳು. ಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳು ಭಾರತದ ಭದ್ರತೆಯ ಮೇಲೆ ರಾಜಕೀಯ ನಡೆಸುತ್ತಿವೆ ಎಂದು ಮೋದಿ ಆರೋಪಿಸಿದರು.

ಭಾಷಣದಲ್ಲಿ ಜಮ್ಮು ಮತ್ತು ಕಾಶ್ಮೀರದ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪೀಪಲ್ಸ್‌ ಡೆಮಾಕ್ರಟಿಕ್‌ ಪಾರ್ಟಿ ವಿರುದ್ಧ ಹರಿಹಾಯ್ದ ಮೋದಿ, ಒಂದು ರಾಷ್ಟ್ರಕ್ಕೆ ಇಬ್ಬರು ಪ್ರಧಾನಮಂತ್ರಿಗಳು ಇರಲು ಸಾಧ್ಯವಿಲ್ಲ ಎಂದರು. ಅಲ್ಲದೇ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕುಟುಂಬಗಳ ಮೂರು ತಲೆಮಾರಿನವರು ಹಾಳು ಮಾಡಿದ್ದಾರೆ. ಅಬ್ದುಲ್ಲಾ ಮತ್ತು ಮುಫ್ತಿಗಳಿಂದ ಭಾರತವನ್ನು ಒಡೆಯಲು ಬಿಡುವುದಿಲ್ಲ ಎಂದ ಗುಡುಗಿದ್ದಾರೆ.

ಕಣಿವೆ ರಾಜ್ಯದಲ್ಲಿ ಮೂಲ ನಿವಾಸಿಗಳಾದ ಪಂಡಿತರು ವಲಸೆ ಹೋಗಿರುವುದಕ್ಕೆ ಕಾಂಗ್ರೆಸ್‌ ಕಾರಣ ಎಂದು ಪಿಎಂ ಮೋದಿ ಆರೋಪಿಸಿದ್ದಾರೆ. ವಲಸೆ ಹೋದ ಸಮುದಾಯವನ್ನು ಮತ್ತೆ ಸ್ವಂತ ನಾಡಿಗೆ ಮರಳುವಂತೆ ಮಾಡುವತ್ತ ದಿಟ್ಟ ಹೆಜ್ಜೆ ಇಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ಜಲಿಯನ್‌ ವಾಲಾ ಬಾಗ್‌ ಕಾರ್ಯಕ್ರಮಕ್ಕೆ ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಭೇಟಿ ನೀಡದ ವಿಚಾರವನ್ನು ಪ್ರಸ್ತಾಪಿಸಿ, ಕ್ಯಾಪ್ಟನ್‌ ಅಮರಿಂದರ್‌ ಅವರಿಗೆ ಸಮಯವಿಲ್ಲ, ಅವರು ಪರಿವಾರ ಭಕ್ತಿಯಲ್ಲಿ ಬ್ಯುಸಿಯಾಗಿದ್ದರು ಎಂದು ವ್ಯಂಗ್ಯ ಮಾಡಿದ್ದಾರೆ. ಜಲಿಯನ್‌ ವಾಲಾ ಬಾಗ್‌ಗೆ ಉಪ ರಾಷ್ಟ್ರಪತಿ ಅವರೊಂದಿಗೆ ತೆರಳದೆ ನಾಮ್‌ದಾರ್‌(ರಾಹುಲ್‌) ಜತೆ ಹೋದರು. ಇದೇ ರಾಷ್ಟ್ರಭಕ್ತಿ ಮತ್ತು ಪರಿವಾರ ಭಕ್ತಿ ಮೇಲಿನ ವ್ಯತ್ಯಾಸ ಎಂದು ಪಿಎಂ ಮೋದಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ