ಚುನಾವಣಾ ಅಭ್ಯರ್ಥಿಗಳು ಮತ್ತು ಅಭ್ಯರ್ಥಿಗಳ ಪ್ರತಿನಿದಿಗಳ ಸಭೆ-ಪಕ್ಷೇತರ ಅಭ್ಯರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ

ಬೆಂಗಳೂರು, ಏ.14-ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಚುನಾವಣಾ ಸ್ಪರ್ಧಾ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪ್ರತಿನಿಧಿಗಳ ಸಭೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಭಾಗವಹಿಸದೆ ಪಕ್ಷೇತರ ಅಭ್ಯರ್ಥಿಗಳು ಮಾತ್ರ ಪಾಲ್ಗೊಂಡಿದ್ದು ಒಂದು ವಿಶೇಷವಾದರೆ, ಪಕ್ಷೇತರ ಅಭ್ಯರ್ಥಿಗಳಿಂದ ಪ್ರಶ್ನೆಗಳ ಸುರಿ ಮಳೆ ಮತ್ತೊಂದು ವಿಶೇಷವಾಗಿತ್ತು.

ಬೆಂಗಳೂರು ನಗರ ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ನಿಯೋಜಿತರಾಗಿರುವ ವಿಶೇಷಾಧಿಕಾರಿಗಳೂ ಆಗಿರುವ ಭೂ ಕಂದಾಯ ಮತ್ತು ಭೂಮಾಪನಾ ಇಲಾಖೆಯ ಆಯುಕ್ತ ಮೌನಿಷ್ ಮುದ್ಗಿಲ ಹಾಗೂ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಚುನಾವಣಾ ನಿರ್ವಚನಾಧಿಕಾರಿಗಳೂ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯ್‍ಶಂಕರ್ ಅವರ ಸಮ್ಮುಖದಲ್ಲಿ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ಪೂರಕವಾಗುವಂತಹ ಅತ್ಯುತ್ತಮ ಸಲಹೆಗಳೂ ಹರಿದು ಬಂದವು.

ಇಂತಹವರಿಗೆ ಮತ ಹಾಕಬಾರದು ಇಂತಹವರಿಗೆ ಮತ ಹಾಕಬೇಕು ಎಂದು ಕೆಲವು ಧಾರ್ಮಿಕ ಮುಖಂಡರು ತಮ್ಮ ಸಮುದಾಯದ ಮತದಾರರಿಗೆ ಫರ್ಮಾನು ಹೊರಡಿಸುತ್ತಿದ್ದಾರೆ. ಮತ್ತೊಬ್ಬರ ಹಕ್ಕು ಕಸಿದು ಕೊಳ್ಳುವ ಇಂತಹ ಧಾರ್ಮಿಕ ಮುಖಂಡರಿಗೆ ಮುಗ್ಧ ಮತದಾರರ ಸ್ವಾತಂತ್ರ್ಯ ಹರಣ ಮಾಡಲು ಅಧಿಕಾರ ಕೊಟ್ಟವರು ಯಾರು ? ಎಂದು ಓರ್ವ ಅಭ್ಯರ್ಥಿ ಪ್ರಶ್ನಿಸಿದರು.

ರಾಷ್ಟ್ರೀಯ ಪಕ್ಷಗಳು ನಡೆಸುವ ಚುನಾವಣಾ ಪ್ರಚಾರದಲ್ಲಿ ಧ್ವಜಗಳ ಭರಾಟೆ ಎದ್ದು ಕಾಣಿಸುತ್ತವೆ. ಒಂದು ನಿರ್ದಿಷ್ಟ ಗಾತ್ರಕ್ಕಿಂತಲೂ ಹೆಚ್ಚು ಗಾತ್ರದ ಧ್ವಜಗಳ ಬಳಕೆಗೆ ಭಾರತ ಚುನಾವಣಾ ಆಯೋಗ ಅನುಮತಿ ನೀಡಬಾರದು ಎಂದು ಮತ್ತೊಬ್ಬ ಅಭ್ಯರ್ಥಿ ಸಲಹೆ ಇತ್ತರು.

ಸಾರ್ವಜನಿಕರ ಗಮನ ಸೆಳೆಯಲು ರಾಷ್ಟ್ರೀಯ ಪಕ್ಷಗಳು ನಡೆಸುವ ಬೈಕ್ ರ್ಯಾಲಿಗಳಲ್ಲಿ ಎಷ್ಟು ಬೈಕ್‍ಗಳು ಸಾಗುತ್ತಿವೆ. ಬೈಕ್‍ಗಳಲ್ಲಿ ಅಳವಡಿಸಿರುವ ಧ್ವಜ ಮತ್ತಿತರ ಪ್ರಚಾರ ಸಾಮಗ್ರಿಗಳ ವೆಚ್ಚ ವಿವರಗಳ ಮಾಹಿತಿ ತಮ್ಮಲ್ಲಿದೆಯೇ ? ಆ ಬೈಕ್ ಸವಾರರು ಅಭಿಮಾನದಿಂದ ಬಂದಿದ್ದಾರೆಯೇ ?ಸಂಭಾವನೆ ಪಡೆದಿದ್ದಾರೆಯೇ?ಎಂಬುದು ಸೇರಿದಂತೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು.

ಚುನಾವಣೆ ಘೋಷಣೆಯಾದ ದಿನದಿಂದಲೂ ಇಂತಹವರು ಗೆಲ್ಲುತ್ತಾರೆ ಇಂತಹವರು ಸೋಲುತ್ತಾರೆ, ಇಂತಹವರು ಗೆಲ್ಲಬಹುದು ಇಂತಹವರು ಸೋಲಬಹುದು ಎಂಬ ಅಭಿಪ್ರಾಯಗಳನ್ನು ಹೊರಹಾಕುವ ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿವೆ. ಒಂದೆಡೆರಡು ಅಭ್ಯರ್ಥಿಗಳ ಬಗ್ಗೆ ಇಂತಹ ಅಭಿಪ್ರಾಯಗಳು ವ್ಯಕ್ತವಾದಾಗ ಸ್ಪರ್ಧಾ ಕಣದಲ್ಲಿರುವ ಇತರ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತವೆ. ಮತದಾನ ನಡೆಯುವ ಮುನ್ನ ಬಿತ್ತರವಾಗುವ ಇಂತಹ ಕಾರ್ಯಕ್ರಮಗಳನ್ನು ಪಾವತಿ ಸುದ್ದಿಗಳು ಎಂದು ಕರೆಯಬಹುದಲ್ಲವೇ ? ಎಂಬುದು ಮತ್ತೊಬ್ಬ ಅಭ್ಯರ್ಥಿಯ ಅಭಿಪ್ರಾಯವಾಗಿತ್ತು.

ರಾಷ್ಟ್ರೀಯ ಪಕ್ಷಗಳು ಪ್ರಚಾರ ಸಂದರ್ಭದಲ್ಲಿ ಮತದಾರರಿಗೆ ವಿತರಿಸಲು ಲಕ್ಷಾಂತರ ಸಂಖ್ಯೆಯಲ್ಲಿ ಕರ ಪತ್ರಗಳನ್ನು ಮುದ್ರಿಸಿದ್ದರೂ, ಕರ ಪತ್ರಗಳಲ್ಲಿ ನಮೂದಿಸುತ್ತಿರುವ ಸಂಖ್ಯೆಗಳು ಕೆಲವು ಸಾವಿರ ಎಂದೇ ನಮೂದು ಮಾಡುತ್ತಿವೆ. ಇದು ಇಡೀ ರಾಜ್ಯ ಮಟ್ಟದಲ್ಲಿ ವಿತರಿಸುವ ಕರ ಪತ್ರವೋ ಅಥವಾ ಒಂದು ಕ್ಷೇತ್ರಕ್ಕೆ ಸೀಮಿತವಾಗಿ ವಿತರಿಸುವ ಕರ ಪತ್ರವೋ ಎಂಬುದು ಗೊತ್ತಾಗುತ್ತಿಲ್ಲ. ಪಕ್ಷಗಳೇ ಚುನಾವಣಾ ಸಾಮಗ್ರಿ ಸರಬರಾಜು ಮಾಡಿದೆ ಎಂಬ ಹಿನ್ನೆಲೆಯಲ್ಲಿ ಇದು ಅಭ್ಯರ್ಥಿಯ ಚುನಾವಣಾ ವೆಚ್ಚದಲ್ಲೂ ದಾಖಲಾಗದೆ ಪ್ರಚಾರದ ಬಳಕೆಗೆ ದೊರೆಯುತ್ತಿದೆ. ಇದರಿಂದ ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳಿಗೆ ಲಾಭವಾಗುತ್ತಿವೆ. ಆದರೆ, ಪಕ್ಷೇತರ ಅಭ್ಯರ್ಥಿಗಳು ಮಾತ್ರ ಎಲ್ಲಕ್ಕೂ ಲೆಕ್ಕ ಕೊಡುವಂತಾಗಿದೆ ಎಂಬುದು ಇನ್ನೋರ್ವ ಪಕ್ಷೇತರ ಅಭ್ಯರ್ಥಿಯ ಅನಿಸಿಕೆ.

ತಮ್ಮೆಲ್ಲಾ ಸಲಹೆ ಸೂಚನೆಗಳನ್ನು ಭಾರತ ಚುನಾವಣಾ ಆಯೋಗದ ಗಮನಕ್ಕೆ ತರುತ್ತೇವೆ. ಮುಕ್ತ, ನಿಷ್ಪಕ್ಷಪಾತ ಹಾಗೂ ನ್ಯಾಯಯುತ ಚುನಾವಣೆಗೆ ಎಲ್ಲರ ಸಹಕಾರ ಮುಖ್ಯ ಎಂದು ತಿಳಿಸಿದ ಮೌನಿಷ್ ಮುದ್ಗಿಲ್ ಅವರು ಚುನಾವಣಾ ಅಕ್ರಮಗಳೇನಾದರೂ ಕಂಡು ಬಂದಲ್ಲಿ ಶುಲ್ಕ-ರಹಿತ ದೂರವಾಣಿ : 1950 ಅಥವಾ ಬೆಂಗಳೂರು ಉತ್ತರ ಲೋಕ ಸಭಾ ಕ್ಷೇತ್ರದ ಸಹಾಯವಾಣಿ : 080 – 224 0515 ಅಥವಾ ತಮ್ಮ ಸಂಚಾರಿ ದೂರವಾಣಿ ಸಂಖ್ಯೆ : 94481 94915 ಸಂಪರ್ಕಿಸಿ ಮಾಹಿತಿ ನೀಡಿ ಎಂದು ಅಭ್ಯರ್ಥಿಗಳಲ್ಲಿ ಮನವಿ ಮಾಡಿದರು.

ಚುನವಣಾ ಸಂದರ್ಭದಲ್ಲಿ ಮದ್ಯ ಮಾರಾಟ ಹೆಚ್ಚು ಎಂಬುದು ಜನಜನಿತವಾಗಿದೆ. ಆದಕಾರಣ, ಚುನಾವಣಾ ಅವಧಿಯಲ್ಲಿ ಮದ್ಯ ಮಾರಾಟದಲ್ಲಿ ತೊಡಗಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ನಾಷನಲ್ಸ್ ಲಿಮಿಟೆಡ್‍ನ ಚಟುವಟಿಕೆಗಳನ್ನು ನಿರ್ಬಂಧಿಸಿದಲ್ಲಿ ಮದ್ಯ ಖರೀದಿ ಮತ್ತು ಸಾಗಣೆಯನ್ನು ನಿರ್ಬಂಧಿಸಬಹುದಾಗಿದೆ. ಚುನಾವಣಾ ಅಭ್ಯರ್ಥಿಗಳ ವಾಹನಗಳಿಗೆ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ ಟ್ರ್ಯಾಕಿಂಗ್ (ಜಿಪಿಎಸ್) ಅಳವಡಿಸಿದರೆ ಅಭ್ಯರ್ಥಿಗಳ ಚಲನ-ವಲನದ ಮೇಲೆ ನಿಗಾ ಇಡಬಹುದಾಗಿದೆ. ಅಲ್ಲದೆ, ಈ ಹಿಂದೆ ಪೊಲೀಸ್ ವಾಹನಗಳಲ್ಲೂ ಹಣ ಸಾಗಣೆಯ ಆರೋಪಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ವಾಹನಗಳನ್ನೂ ತಪಾಸಣೆಗೆ ಒಳಪಡಿಸಬೇಕು ಎಂದು ಇದೇ ಸಂದರ್ಭದಲ್ಲಿ ಸಲಹೆಗಳನ್ನು ನೀಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ