ಬೆಂಗಳೂರು, ಏ.14-ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ ಬಂದಿದ್ದು, ಕಾಂಗ್ರೆಸ್ ಪಕ್ಷದ ಇಬ್ಬರು ಸಚಿವರ ನಡುವಿನ ಜಟಾಪಟಿ ಹೈಕಮಾಂಡ್ ಅಂಗಳ ತಲುಪಿದೆ.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಕುರಿತಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಬಹಿರಂಗ ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಕ್ಷಮೆ ಕೋರಿದ್ದು, ಪ್ರತ್ಯೇಕ ಧರ್ಮ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರನ್ನು ಕೆರಳಿಸಿದೆ.
ಗೃಹ ಸಚಿವರಾದ ಎಂ.ಬಿ.ಪಾಟೀಲ್ ಅವರು ಈ ಸಂಬಂಧ ನಿನ್ನೆಯಷ್ಟೇ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿ ಕಾರಿದ್ದು ತಡರಾತ್ರಿ ವಿವಾದ ಸಂಬಂಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರೊಂದಿಗೆ ದೂರವಾಣಿ ಮುಖೇನ ಮಾತನಾಡಿ ಡಿ.ಕೆ.ಶಿವಕುಮಾರ್ ವಿರುದ್ಧ ದೂರು ನೀಡಿದ್ದಾರೆ ಎನ್ನಲಾಗಿದೆ.
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಉಂಟಾದ ಸಂದರ್ಭದಲ್ಲೇ 16 ಲಿಂಗಾಯತ ಶಾಸಕರು ಗೆಲುವು ಸಾಧಿಸಿದ್ದಾರೆ.
ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಅಂದರೆ ತಮ್ಮ ಸಮುದಾಯದವರು ಪ್ರಬಲವಾಗಿರುವ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಶಾಸಕರಿಲ್ಲ. ಅಲ್ಲಿ ಪಕ್ಷವನ್ನು ಬಲಪಡಿಸಲಿ. ಅದನ್ನು ಬಿಟ್ಟು ಅನಗತ್ಯವಾಗಿ ಈ ವಿಚಾರವಾಗಿ ಮೂಗು ತೂರಿಸುವುದು ಬೇಡ ಎಂದು ಅಲವತ್ತುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಾಯತ ಧರ್ಮಕ್ಕಾಗಿ ಹೋರಾಟ ಮಾಡಿದ ಮಠಾಧೀಶರು, ಪ್ರಮುಖರು ಡಿ.ಕೆ.ಶಿವಕುಮಾರ್ ಅವರ ವರ್ತನೆಯಿಂದ ಬೇಸತ್ತು ನನ್ನ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಅಂಶ ಚುನಾವಣೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ.ಅವರು ಗೊಂದಲ ಸೃಷ್ಠಿಸಿರುವುದರಿಂದ ಲಿಂಗಾಯತರ ಮೇಲೆ ಅನಗತ್ಯ ಹೇಳಿಕೆ ನೀಡಿರುವುದರಿಂದ ಪಕ್ಷಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ಕಾಂಗ್ರೆಸ್ನ ಕೈ ಹಿಡಿದಿರುವುದೇ ಲಿಂಗಾಯತ ಸಮುದಾಯ. ಹಾಗಾಗಿ ಡಿ.ಕೆ.ಶಿವಕುಮಾರ್ ಅವರನ್ನು ಈ ವಿಚಾರವಾಗಿ ಸುಮ್ಮನಿರುವಂತೆ ಹೇಳಿ ಎಂದು ರಾಹುಲ್ ಗಾಂಧಿಯವರನ್ನು ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.