ಬೆಂಗಳೂರು, ಏ.14-ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಲಿದ್ದು, ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಅರವಿಂದ ಲಿಂಬಾವಳಿ ಹೇಳಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 65 ವರ್ಷ ಮೀರಿದವರಿಗೆ ಪ್ರಮುಖ ಹುದ್ದೆಗಳನ್ನು ಕೊಡಬಾರದು ಎಂದು ಬಿಜೆಪಿಯಲ್ಲಿ ನಿಯಮ ರಚನೆಯಾಗಿಲ್ಲ. ಅಂತಹ ಒಂದು ಸಿದ್ಧಾಂತದ ಚರ್ಚೆ ನಡೆದಿದೆ. ಮೊದಲು ಮೇಲ್ಮಟ್ಟದ ನಾಯಕರಿಗೆ ಅದನ್ನು ಅನುಷ್ಠಾನಗೊಳಿಸಬೇಕು ಎಂಬ ಹಿನ್ನೆಲೆಯಲ್ಲಿ ಅಡ್ವಾಣಿ, ಮುರಳಿ ಮನೋಹರ್ ಜೋಷಿ ಅಂತವರಿಗೆ ಟಿಕೆಟ್ ಸಿಕ್ಕಿಲ್ಲ. ಕರ್ನಾಟಕದಲ್ಲಿ ಅದಿನ್ನು ಜಾರಿಯಾಗಿಲ್ಲ. ಮೇಲ್ಮಟ್ಟದಲ್ಲಿ ಅನುಷ್ಠಾನಗೊಂಡು ಕರ್ನಾಟಕಕ್ಕೆ ಬರಲು ಸಾಕಷ್ಟು ಸಮಯ ಹಿಡಿಯುತ್ತದೆ. ಆವರೆಗೂ ನಮ್ಮ ನಾಯಕರಾದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿರುತ್ತಾರೆ ಎಂದರು.
ಸಮ್ಮಿಶ್ರ ಸರ್ಕಾರ ಪರಸ್ಪರ ಅಪನಂಬಿಕೆಯಲ್ಲಿ ನಡೆಯುತ್ತಿದೆ. ಆಡಳಿತದಲ್ಲಿ ವೈಫಲ್ಯಗಳಾಗಿವೆ. ಅವರ ಒಳಜಗಳದಿಂದಾಗಿಯೇ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಸನ್ನಿವೇಶಗಳಿವೆ. ಬಿಜೆಪಿ ಸರ್ಕಾರ ರಚಿಸುವ ಅವಕಾಶ ಬಂದರೆ ವಯೋಮಿತಿ ಪಕ್ಕಕ್ಕಿಟ್ಟು ನಮ್ಮ ಮುಖ್ಯಮಂತ್ರಿ ಅಭ್ಯರ್ಥಿಯಾದ ಯಡಿಯೂರಪ್ಪ ಅವರೇ ಅಧಿಕಾರ ವಹಿಸಿಕೊಳ್ಳುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದರು.
ಬಿಜೆಪಿಯಲ್ಲಿ ಮೂರು ವರ್ಷದ ನಂತರ ಪಕ್ಷದ ಅಧ್ಯಕ್ಷರ ಬದಲಾವಣೆಗಳಾಗುತ್ತವೆ. ಯಡಿಯೂರಪ್ಪ ಅವರ ಅಧಿಕಾರಾವಧಿ ಮೂರು ವರ್ಷಕ್ಕಿಂತ ಹೆಚ್ಚಾಗಿದೆ.ಲೋಕಸಭೆ ಚುನಾವಣೆ ಮುಗಿದು ಕೇಂದ್ರದಲ್ಲಿ ಸರ್ಕಾರ ರಚನೆ ಮುಗಿದ ಬಳಿಕ ರಾಜ್ಯದಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ.
ಬೂತ್ಮಟ್ಟದಿಂದ ಅಧ್ಯಕ್ಷರ ಆಯ್ಕೆಯಾಗಿ ರಾಜ್ಯಮಟ್ಟದ ಅಧ್ಯಕ್ಷರ ಆಯ್ಕೆ ವೇಳೆಗೆ ಸರಿಸುಮಾರು ಒಂದು ವರ್ಷ ಸಮಯ ಬೇಕಾಗಬಹುದು ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಸಂಸದರು ತಮ್ಮ ಸಾಧನೆಗಳನ್ನು ಪುಸ್ತಕ ರೂಪದಲ್ಲಿ ಮುದ್ರಿಸಿ ಮನೆ ಮನೆಗೆ ಹಂಚಿಕೆ ಮಾಡಿದ್ದಾರೆ.ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರು ಇರುವುದರಿಂದ ಸಹಜವಾಗಿ ಅವರ ಹೆಸರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗುತ್ತಿದೆ. ಜೆಡಿಎಸ್ಗೆ ಬಿಜೆಪಿ ಜೊತೆ ಸರ್ಕಾರ ಮಾಡುವ ಮನಸ್ಸಿದ್ದಿದ್ದರೆ 2018ರ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕವೇ ನಮ್ಮೊಂದಿಗೆ ಮೈತ್ರಿಗೆ ಬರುತ್ತಿದ್ದರು. ಮತ ಎಣಿಕೆ ಮುಗಿಯುವ ಮುನ್ನವೇ ಕಾಂಗ್ರೆಸ್ಸಿಗರು ಜೆಡಿಎಸ್ ಮನೆ ಬಾಗಿಲಿಗೆ ಹೋಗಿ ಮೈತ್ರಿ ಮಾಡಿಕೊಂಡರು ಎಂದು ಲೇವಡಿ ಮಾಡಿದರು.
ಕೇಂದ್ರ ಸರ್ಕಾರ ಜನ್ಧನ್, ಆಯುಷ್ಮಾನ್, ಸ್ವಚ್ಛ ಭಾರತ್, ಉಜ್ವಲ್, ಉಜಾಲಾದಂತಹ ಹಲವಾರು ಯೋಜನೆಗಳ ಮೂಲಕ ಜನೌಷಧಿ ಕೇಂದ್ರಗಳ ಮೂಲಕ ಲಕ್ಷಾಂತರ ಜನರಿಗೆ ಅನುಕೂಲವಾಗುತ್ತಿದೆ.2020ರ ವೇಳೆಗೆ ಎಲ್ಲರಿಗೂ ಸೂರು ಎಂಬ ಗುರಿ ನಿಗದಿಪಡಿಸಲಾಗಿದೆ.
ಕರ್ನಾಟಕ ರಾಜ್ಯಕ್ಕೂ ಸಾವಿರಾರುಕೋಟಿ ರೂ.ಗಳ ಅನುದಾನ ಹರಿದು ಬಂದಿದೆ.ಬೆಂಗಳೂರಿಗೆ ನಿರ್ಭಯ ಯೋಜನೆಯಡಿ 650 ಕೋಟಿ, ಅಮೃತ್ ಯೋಜನೆಯಡಿ 1635 ಕೋಟಿ, ಮನೆ ನಿರ್ಮಾಣಕ್ಕೆ 2680 ಕೋಟಿ, ಮೆಟ್ರೋಗೆ 5540 ಕೋಟಿ ಸೇರಿದಂತೆ ಸಾಕಷ್ಟು ಅನುದಾನ ಬಂದಿದೆ. 14ನೇ ಹಣಕಾಸು ಆಯೋಗದಲ್ಲಿ 2 ಲಕ್ಷ ಕೋಟಿ ರಾಜ್ಯಕ್ಕೆ ಸಿಕ್ಕಿದೆ. ಎನ್ಡಿಆರ್ಎಫ್ನಲ್ಲಿ 7500 ಕೋಟಿ ರೂ., ಹೆದ್ದಾರಿ ಅಭಿವೃದ್ಧಿಗೆ 17,550 ಕೋಟಿ ಅನುದಾನ ಬಂದಿದೆ. ಆದರೆ ರಾಜ್ಯ ಸರ್ಕಾರ ಜನಪರ ಆಡಳಿತ ನಡೆಸುತ್ತಿಲ್ಲ. ಪರಸ್ಪರ ಕಚ್ಚಾಟದಲ್ಲಿ ಮುಳುಗಿದೆ. ಹೀಗಾಗಿ ಜನ ಬೇಸತ್ತಿದ್ದಾರೆ ಎಂದು ಹೇಳಿದರು.