ಕ್ರಿಮಿನಲ್ ಹಿನ್ನಲೆಯಿರುವ ಅಭ್ಯರ್ಥಿಗಳು ಯಾವ ಜಾಹೀರಾತನ್ನು ನೀಡದೇಯಿರುವುದು ಅಪರಾಧ-ಬಿಬಿಎಂಪಿ ಅಧಿಕಾರಿ ಮೌನೀಷ್ ಮುದ್ಗಿಲ್

ಬೆಂಗಳೂರು, ಏ.14- ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ತಮ್ಮ ಮೇಲಿರುವ ಕ್ರಿಮಿನಲ್ ಮೊಕದ್ದಮೆಗಳ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಪತ್ರಿಕೆಗಳಲ್ಲಿ ಸಾರ್ವಜನಿಕ ಜಾಹೀರಾತು ನೀಡದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಬಿಎಂಪಿಯ ಚುನಾವಣಾ ಉಸ್ತುವಾರಿ ಅಧಿಕಾರಿ ಮೌನೀಷ್ ಮುದ್ಗಿಲ್ ಸದರಿ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಬಗ್ಗೆ ಸಂಜೆಯೊಳಗಾಗಿ ತೀರ್ಮಾನ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ನಗರದ ಕಂದಾಯ ಭವನದಲ್ಲಿ ಬೆಂಗಳೂರು ಕೇಂದ್ರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳು ಮತ್ತು ಅವರ ಏಜೆಂಟರ ಸಭೆ ನಡೆಸಿದ ಅವರು, ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಮತ್ತು ಜನಪ್ರಾತಿನಿಧ್ಯ ಕಾಯ್ದೆಯ ಅನುಸಾರ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳು ಮೂರು ಬಾರಿ ಪತ್ರಿಕೆಗಳಲ್ಲಿ, ಮೂರು ಬಾರಿ ಟಿವಿಗಳಲ್ಲಿ ತಮ್ಮ ಕ್ರಿಮಿನಲ್ ಮೊಕದ್ದಮೆಗಳ ಸಾರ್ವಜನಿಕ ಪ್ರಕಟಣೆ ನೀಡಬೇಕು. ಚುನಾವಣೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದ್ದರೂ ಈವರೆಗೂ ಕ್ರಿಮಿನಲ್ ಹಿನ್ನೆಲೆ ಇರುವ ಅಭ್ಯರ್ಥಿಗಳು ಯಾವ ಜಾಹೀರಾತನ್ನು ನೀಡಿಲ್ಲ. ಇದು ಗಂಭೀರ ಸ್ವರೂಪದ ಅಪರಾಧವಾಗಿದೆ ಎಂದು ಮೌನೀಷ್ ಮುದ್ಗಿಲ್ ಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಕೆಲವು ಅಭ್ಯರ್ಥಿಗಳು ಮತ್ತು ಏಜೆಂಟರುಗಳು ಇದು ಚುನಾವಣಾ ಆಯೋಗದ ಕರ್ತವ್ಯ.ಪ್ರಕಟಣೆ ನೀಡಬೇಕಾಗಿರುವುದು ಆಯೋಗವೇ ಹೊರತು ನಾವಲ್ಲ ಎಂದು ವಾದ ಮಾಡಿದರು.

ಇದರಿಂದ ಏಕಾಏಕಿ ಕೆಂಡಾಮಂಡಲವಾದ ಮೌನೀಷ್ ಮುದ್ಗಿಲ್ ಆ ರೀತಿ ಯಾವ ಕಾನೂನಿದೆ, ಯಾವ ನ್ಯಾಯಾಲಯದ ಆದೇಶ ಇದೆ ತಿಳಿಸಿ ಎಂದು ತರಾಟೆಗೆ ತೆಗೆದುಕೊಂಡರು.

ನಿಯಮಗಳ ಪ್ರಕಾರ ಸಾರ್ವಜನಿಕ ಪ್ರಕಟಣೆ ನೀಡುವುದು ಅಭ್ಯರ್ಥಿಗಳ ಜವಾಬ್ದಾರಿ. ಅದನ್ನು ಮಾಡದೆ ಈವರೆಗೂ ಸುಮ್ಮನಿರುವುದು ನೀತಿ ಸಂಹಿತೆ ಸ್ಪಷ್ಟ ಉಲ್ಲಂಘನೆ. ಕುಂಟು ನೆಪಗಳನ್ನು ಹೇಳದೆ ನಿಮ್ಮ ಜವಾಬ್ದಾರಿಯನ್ನು ನೀವು ನಿಭಾಯಿಸಬೇಕು ಎಂದು ಖಾರವಾಗಿ ಹೇಳಿದರು.

ಚುನಾವಣಾ ಉಸ್ತುವಾರಿ ಅಧಿಕಾರಿಯ ಸಿಟ್ಟು ಒಂದು ಕ್ಷಣ ಅಭ್ಯರ್ಥಿಗಳನ್ನು ತಬ್ಬಿಬ್ಬು ಮಾಡಿತು.ಬೆಂಗಳೂರು ಉತ್ತರದಲ್ಲಿ ಇಬ್ಬರು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿದ್ದಾರೆ.ದಕ್ಷಿಣ ಹಾಗೂ ಕೇಂದ್ರ ಲೋಕಸಭಾ ಕ್ಷೇತ್ರಗಳಲ್ಲಿ ಹಲವಾರು ಮಂದಿಯ ಮೇಲೆ ಕ್ರಿಮಿನಲ್ ಕೇಸುಗಳಿವೆ. ಆದರೆ ಇದುವರೆಗೂ ಯಾರೂ ಜಾಹೀರಾತು ನೀಡಿಲ್ಲ. ಮೂರು ಬಾರಿ ಜಾಹೀರಾತು ನೀಡಬೇಕಾದರೆ ಈಗಾಗಲೇ ಎರಡು ಬಾರಿ ಜಾಹೀರಾತು ನೀಡಬೇಕಿತ್ತು. ಚುನಾವಣೆಗೆ ಇನ್ನು ಮೂರು ದಿನ ಮಾತ್ರ ಬಾಕಿ ಇದೆ.ಈವರೆಗೂ ಜಾಹೀರಾತು ನೀಡಿಲ್ಲ. ಚುನಾವಣೆ ಮುಗಿದ ಮೇಲೆ ಕೊಡಲು ಸಾಧ್ಯವೇ ಎಂದು ಸಿಟ್ಟು ಹೊರ ಹಾಕಿದರು.

ಜಾಹೀರಾತು ನೀಡದಿರುವ ಕ್ರಿಮಿನಲ್ ಅಭ್ಯರ್ಥಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದು ನಿಶ್ಚಿತ. ಯಾವ ರೀತಿಯ ಕ್ರಮಕೈಗೊಳ್ಳಬೇಕು ಎಂಬುದನ್ನು ಚುನಾವಣಾ ಮುಖ್ಯಾಧಿಕಾರಿಗಳ ಸಮ್ಮುಖದಲ್ಲಿ ಕೇಂದ್ರ ಚುನಾವಣಾಧಿಕಾರಿಗಳ ಜೊತೆ ಚರ್ಚಿಸಿ ಸಂಜೆಯೊಳಗಾಗಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿ ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿಗಳ ಜೊತೆ ಮೌನೀಷ್ ಮುದ್ಗಿಲ್‍ಆಯೋಗದ ಕಚೇರಿಗೆ ತೆರಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ