ಬೆಂಗಳೂರು,ಏ.14- ರಾಜ್ಯದಲ್ಲಿ ಮೊದಲ ಹಂತದಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೇವಲ 48 ಗಂಟೆಗಳು ಮಾತ್ರವೇ ಬಾಕಿಯಿದ್ದು, ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು, ವಿವಿಧ ಪಕ್ಷಗಳ ಮುಖಂಡರು, ಬೆಂಬಲಿಗರು, ಕಾರ್ಯಕರ್ತರು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ.
ಹಳ್ಳಿ ಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮತ ಬೇಟೆ ಜೋರಾಗಿದೆ. ಕಾಂಗ್ರೆಸ್- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳ ಪರ ಹಾಗೂ ಬಿಜೆಪಿ ಅಭ್ಯರ್ಥಿಗಳ ಪರ ಬಹಿರಂಗ ಸಮಾವೇಶ, ರೋಡ್ ಶೋ, ಪಾದಯಾತ್ರೆ ಮೂಲಕ ಪ್ರಚಾರ ನಡೆಸುತ್ತಿದ್ದರೆ, ಇತ್ತ ಇತರ ಪಕ್ಷಗಳ ಮುಖಂಡರು ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ, ವಿವಿಧ ಆಮೀಷಗಳನ್ನು ಒಡ್ಡುವ ಕೆಲಸದಲ್ಲಿ ತೊಡಗಿದ್ದಾರೆ.
ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ಅಭ್ಯರ್ಥಿಗಳು ಬೆಂಬಲಿಗರು, ಮತದಾರರನ್ನು ಸೆಳೆಯಲು ರಂಗೋಲಿ ಕೆಳಗೆ ನುಸುಳುವ ಪ್ರಯತ್ನವನ್ನು ನಡೆಸುತ್ತಿದ್ದಾರೆ. ತಮ್ಮ ಮತ ಬ್ಯಾಂಕ್ಗಳನ್ನು ಭದ್ರಪಡಿಸಿಕೊಳ್ಳಲು ಸ್ಲಂ ಓಟುಗಳನ್ನು ಪಡೆಯಲು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ.ಕಳೆದ ವಿಧಾನಸಭೆ ಚುನಾವಣೆಗಳಲ್ಲಿ ಹಣ ಹಂಚಿಕೆ, ಸೀರೆ, ಮದ್ಯ, ವಿವಿಧ ಉಡುಗೊರೆಗಳನ್ನು ನೀಡಿ ಮತದಾರರನ್ನು ಸೆಳೆಯುವ ಪ್ರಯತ್ನಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿತ್ತು.ಈಗ ಪಕ್ಷಗಳ ಮುಖಂಡರು ಬೇರೆ ತಂತ್ರಗಳ ಮೂಲಕ ಮತದಾರರ ಮನಗೆಲ್ಲುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ನೇರವಾಗಿ ಹಣ ನೀಡಿದರೆ ಆಯೋಗದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಎಲ್ಲೆಡೆ ವ್ಯಾಪಕ ಭದ್ರತೆ ಮಾಡಲಾಗಿದೆ.ಐಟಿ ಅಧಿಕಾರಿಗಳ ಮನಿ ಕಮಾಂಡೋ ಪಡೆ ಅಕ್ರಮ ಹಣ ವಹಿವಾಟು ಆಗದಂತೆ ಸಾಕಷ್ಟು ಎಚ್ಚರಿಕೆ ವಹಿಸಿದೆ. ಈ ನಡುವೆ ರಾಜಕೀಯ ಪಕ್ಷಗಳು ಮತದಾರರಿಗೆ ವಿವಿಧ ಅಂಗಡಿಗಳ ಕೂಪನ್ಗಳು, ಟೋಕನ್ಗಳನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.
ಬಟ್ಟೆ ಅಂಗಡಿ, ಆಭರಣದ ಅಂಗಡಿ, ಮದ್ಯದ ಅಂಗಡಿ, ಮಾಂಸದ ಅಂಗಡಿಗಳಿಗೆ ಟೋಕನ್ಗಳನ್ನು ರಾಜಕೀಯ ಪಕ್ಷಗಳು ನೀಡುವ ಮೂಲಕ ಹೊಸ ತಂತ್ರ ಅನುಸರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣಾ ಸಂದರ್ಭದಲ್ಲಿ ಮಹಿಳೆಯರಿಗೆ ಸೀರೆ, ಮೂಗುತಿ, ಬೆಳ್ಳಿ ಉಡುಗೊರೆಗಳನ್ನು ನೇರವಾಗಿ ಕೊಡಲಾಗುತ್ತಿದ್ದು ಚುನಾವಣಾ ಆಯೋಗ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿರುವುದರಿಂದ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೆಲವು ಅಂಗಡಿಗಳಲ್ಲಿ ಪಡೆಯುವಂತೆ ಟೋಕನ್ಗಳನ್ನು ನೀಡಲಾಗುತ್ತಿದೆ. ಇನ್ನು ಮಾಲ್ಗಳಲ್ಲಿ ವೋಚರ್ಗಳನ್ನು ಖರೀದಿಸಿ ಮತದಾರರಿಗೆ ನೀಡಲಾಗುತ್ತಿದೆ ಎಂದು ಅಲ್ಲಲ್ಲಿ ಕೇಳಿ ಬರುತ್ತಿದೆ.
ಸ್ತ್ರೀಶಕ್ತಿ ಸಂಘಗಳ ಮೂಲಕ, ವಿವಿಧ ಸಂಘಟನೆಗಳ ಮೂಲಕವೂ ಹಣವನ್ನು ಹಂಚಲಾಗುತ್ತಿದೆ ಎಂಬ ಅಂಶವೂ ಕೇಳಿ ಬಂದಿದೆ.ದೇವಾಲಯಗಳಿಗೆ ಭೇಟಿ ನೀಡಿ ಸಮುದಾಯದ ಮುಖಂಡರೊಂದಿಗೆ ಸಮಾಲೋಚಿಸಿ ಇಂತಿಷ್ಟು ಹಣ ಎಂದು ನೀಡುವ ಮೂಲಕ ಮತದಾರರನ್ನು ಸೆಳೆಯುವ ತಂತ್ರವನ್ನು ಅನುಸರಿಸುತ್ತಿವೆ. ಈ ಎಲ್ಲದರ ನಡುವೆ ಹೆಜ್ಜೆ ಹೆಜ್ಜೆಗೂ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ.