ಇಂದು ಕಿಂಗ್ಸ್ ಇಲೆವೆನ್-ಆರ್ಸಿಬಿ ಫೈಟ್: ಗೆಲುವಿನ ಖಾತೆಯನ್ನ ತೆರೆಯುತ್ತಾ ಆರ್ಸಿಬಿ ?

ಒಂದಲ್ಲಾ, ಎರಡಲ್ಲಾ, ಮೂರಲ್ಲ, ಬರೋಬ್ಬರಿ 6 ಸತತ ಸೋಲುಗಳಿಂದ ತೀವ್ರ ಮುಖಭಂಗ ಅನುಭವಿಸಿರೋ ಆರ್ಸಿಬಿ , ಇಂದು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಮೊದಲ ಗೆಲುವಿಗಾಗಿ ಹೋರಾಟ ನಡೆಸಲಿದೆ. ಪಂಜಾಬ್-ಆರ್ಸಿಬಿ ಕದನಕ್ಕೆ ಮೊಹಾಲಿ ಅಂಗಳ ವೇದಿಕೆಯಾಗಿದೆ. ಐಪಿಎಲ್ ಟೂರ್ನಿಯಲ್ಲಿ ಎಲ್ಲಾ ತಂಡಗಳು ಗೆದ್ದು ಅಂಕಪಟ್ಟಿಯಲ್ಲಿ ಅಂಕ ಪಡೆದ್ರೆ, ಆರ್ಸಿಬಿ ಮಾತ್ರ ಕೊನೆ ಸ್ಥಾನವನ್ನ ಬಿಟ್ಟು ಕೊಡಲ್ಲ ಅನ್ನೋ ವಾಗ್ದಾನ ಮಾಡಿದಂತಿದೆ. ಆರ್ಸಿಬಿ ಆಡಿರುವ ಎಲ್ಲ ಪಂದ್ಯಗಳನ್ನು ಸೋತಿದ್ದು, ಮುಂದಿನ ಹಂತಕ್ಕೇರಲು ಆರ್ಸಿಬಿ ಎಲ್ಲಾ 8 ಪಂದ್ಯಗಳನ್ನೂ ರನ್ ರೇಟ್ನಿಂದ ಗೆಲ್ಲಬೇಕಿದೆ.

ಇಂದಾದ್ರೂ ಗೆಲುವಿನ ಖಾತೆ ತೆರೆಯುತ್ತಾ ಆರ್ಸಿಬಿ ?
ಸರ್ವಾಂಗೀಣ ಪ್ರದರ್ಶನ ನೀಡಲು ವಿಫಲವಾಗಿರೋ ಆರ್ಸಿಬಿ, ಬ್ಯಾಕ್ ಟು ಬ್ಯಾಕ್ ಸೋಲುಗಳಿಂದ ಬೆಂಗಳೂರು ಇಂದಿನ ಗೆಲ್ಲಲ್ಲೇಬೇಕಾದ ಒತ್ತಡಕ್ಕೆ ಸಿಲುಕಿದೆ. ಮೊಹಾಲಿಯಲ್ಲಿ ನಾನೇ ಕಿಂಗ್ ಎಂದು ಮೆರೆದಾಡ್ತಿರೋ ತಂಡದೆದುರು ಆರ್ಸಿಬಿ ಗೆಲುವಿನ ಆಸೆಯೊಂದಿಗೆ ಕಣಕ್ಕಿಳಿಯುತ್ತಿದೆ. ಇನ್ನೂ ಕಳೆದ ಪಂದ್ಯದಲ್ಲಿ ಮುಂಬೈ ವಿರುದ್ಧ ಬೃಹತ್ ಮೊತ್ತ ಪೇರಿಸಿದ ಹೊರಾಗಿಯೂ ಮುಖಭಂಗ ಅನುಭವಿಸಿದ್ದ ಪಂಜಾಬ್ ಇಂದು ಮತ್ತೆ ಗೆಲುವಿನ ಟ್ರ್ಯಾಕ್ ಮರುಳುವ ವಿಶ್ವಾಸದಲ್ಲಿದೆ.

ಐಪಿಎಲ್ನಲ್ಲಿ ಇದುವರೆಗೂ ಆರ್ಸಿಬಿ ಮತ್ತು ಪಂಜಾಬ್ ತಂಡಗಳು 22 ಬಾರಿಸಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್ಸಿಬಿ 22 ಬಾರಿ ಗೆಲುವು ದಾಖಲಿಸದ್ರೆ 10 ಬಾರಿ ಸೋಲನ್ನ ಕಂಡಿದೆ.

ಆರ್ಸಿಬಿ ಸೋಲಿಗೆ ಮುಳುವಾಗ್ತಾರಾ ಕನ್ನಡಿಗರು!
ಹೌದು.. ಸದ್ಯ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಟ್ರಂಪ್ ಕಾರ್ಡ್ ಆಗಿರೋ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಪಂದ್ಯದಿಂದ ಪಂದ್ಯಕ್ಕೆ ಶೈನ್ ಆಗ್ತಿದ್ದಾರೆ. ಇದಕ್ಕೆ ಸಾಕ್ಷಿ ಮೊದಲ ಮೂರು ಪಂದ್ಯಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡುವಲ್ಲಿ ವಿಫಲವಾಗಿದ್ದ ಕೆ.ಎಲ್.ರಾಹುಲ್ ನಂತರದ ಪಂದ್ಯಗಳಲ್ಲಿ ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕವೇ ಎಲ್ರೂ ಗಮನ ಸೆಳೆಯುತ್ತಿದ್ದಾರೆ. ಇನ್ನೂ ಟೂರ್ನಿಯಲ್ಲಿ ಮೂರು ಅರ್ಧ ಶತಕ ಹಾಗೂ ಮುಂಬೈ ವಿರುದ್ಧದ ಪಂದ್ಯದಲ್ಲಿ ಮೊಟ್ಟ ಮೊದಲ ಶತಕ ಸಿಡಿಸಿದ್ದು ರಾಹುಲ್ ಶೈನ್ ಆಟಕ್ಕೆ ಸಾಕ್ಷಿ. ಇನ್ನೂ ಮಯಾಂಕ್ ಅಗರ್ವಾಲ್ ಸಹ ಟೂರ್ನಿಯಲ್ಲಿ ಗಮನ ಸೆಳೆಯುತ್ತಿದ್ದ 2 ಅರ್ಧ ಶತಕ ಸಿಡಿಸೋ ಮೂಲಕ ಇಂಪ್ರೆಸ್ ಮಾಡಿದ್ದಾರೆ.

ಕೊಹ್ಲಿ ಪಡೆಗೆ ಕ್ರಿಸ್ ಗೇಲ್ ಭೀತಿ..!
ಪಂಜಾಬ್ ತಂಡದ ಬ್ಯಾಟಿಂಗ್ ಸೆನ್ಸೇಷನ್ ಕ್ರಿಸ್ ಗೇಲ್ ಮುಂಬೈ ವಿರುದ್ಧದ ಪಂದ್ಯದಲ್ಲಿ ಮತ್ತೆ ಫಾರ್ಮ್ ಮರಳಿದ್ದಾರೆ. ಹೀಗಾಗಿ ತನ್ನ ಹಿಂದಿನ ತವರು ತಂಡವಾದ ಆರ್ಸಿಬಿ ವಿರುದ್ಧ ಕ್ರಿಸ್ ಗೇಲ್ ಬ್ಯಾಟ್ ಮೂಲಕ ಉತತರಿಸೋಕೆ ಸಜ್ಜಾಗಿದ್ದಾರೆ. ಕನ್ನಡಿಗರಾದ ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್ ಸಹ ತಮ್ಮ ಬ್ಯಾಟಿಂಗ್ ಖದರ್ ತೋರಿಸೋಕೆ ತುದಿಗಾಲಲ್ಲಿ ನಿಂತಿದ್ದಾರೆ.. ಸರ್ಫರಾಜ್ ಖಾನ್ ಅವರ ಸ್ಲೋ ಬ್ಯಾಟಿಂಗ್ ಪಂಜಾಬ್ಗೆ ತುಸು ಹಿನ್ನಡೆಯಾಗಿದೆ. ಇನ್ನೂ ಮಧ್ಯಮಕ್ರಮಾಂಕದ ಬ್ಯಾಟ್ಸ್ಮನ್ಸ್ ಮಿಲ್ಲರ್, ಮನ್ದೀಪ್ ಸಿಂಗ್ ಸ್ಲಾಗ್ ಓವರ್ಗಳಲ್ಲಿ ರನ್ ಮಳೆ ಹರಿಸೋಕೆ ರೆಡಿಯಾಗಿದ್ದಾರೆ.

ಆರ್ಸಿಬಿ ಬೌಲಿಂಗ್ಗೆ ಹೋಲಿಸಿದ್ರೆ ಪಂಜಾಬ್ ತಂಡದ ಬೌಲಿಂಗ್ ಬಲಿಷ್ಠವಾಗಿದೆ. ಆರ್ಸಿಬಿಗೆ ಸೆಡ್ಡುಹೊಡೆಯಬಲ್ಲ ಬೌಲರ್ಗಳ ದಂಡೇ ಪಂಜಾಬ್ ತಂಡದಲ್ಲಿದೆ. ಇಂಗ್ಲೆಂಡ್ನ 20 ವರ್ಷದ ಯುವ ವೇಗಿ ಸ್ಯಾಮ್ ಕರನ್, ಮೊಹಮ್ಮದ್ ಶಮಿ ಪಂಜಾಬ್ ಎಕ್ಸ್ಪ್ರೆಸ್ಗಳಾಗಿದ್ದಾರೆ. ಕಳೆದ ಪಂದ್ಯದಲ್ಲಿ ಗಾಯಗೊಂಡಿದ್ದ ಯುವ ವೇಗಿ ರಜಪೂತ್ ಕಣಕ್ಕಿಳಿಯೋದು ಅನುಮಾನ. ಕೇರಂ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್, ಅಫ್ಘಾನ್ ಸ್ಪಿನ್ನರ್ ಮುಜೀಬ್ ರೆಹಮಾನ್ ರನ್ ದಾಹಕ್ಕೆ ಕಡಿವಾಣ ಹಾಕೋದ್ರ ಜೊತೆಗೆ ವಿಕೆಟ್ ಕೀಳೋದರಲ್ಲೂ ಮುಂದಿದ್ದಾರೆ.

ಯಾರೂ ಮಾಡದ ದಾಖಲೆ ನಿರ್ಮಿಸುತ್ತಾ ಆರ್ಸಿಬಿ..?
ಐಪಿಎಲ್ನಲ್ಲಿ ಸತತ 6 ಸೋಲುಗಳಿಂದ ದಾಖಲೆ ಬರೆದಿರೋ ಆರ್ಸಿಬಿ, ಇನ್ನೊಂದು ಪಂದ್ಯ ಆರ್ಸಿಬಿ ಸೋತರೆ ಆರಂಭ ಪಂದ್ಯಗಳಲ್ಲಿ ಸತತ 7 ಪಂದ್ಯಗಳನ್ನ ಸೋತ ತಂಡ ಎಂಬ ಕುಖ್ಯಾತಿಗೆ ಆರ್ಸಿಬಿ ಪಾತ್ರವಾಗುತ್ತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅನಗತ್ಯ ದಾಖಲೆಯನ್ನ ರಾಯಲ್ ಚಾಲೆಂಜರ್ಸ್ ತಂಡ ಸರಿಗಟ್ಟಲಿದೆ. ಇನ್ನು ಇಂಥಹ ಕುಖ್ಯಾತಿಯಿಂದ ದೂರವಿರಲು ರಾಯಲ್ ಚಾಲೆಂಜರ್ಸ್ ತಂಡ ಮೈಚಳಿಬಿಟ್ಟು ಮೈದಾನದಲ್ಲಿ ಆಟವಾಡಬೇಕಿದೆ…

ಆರ್ಸಿಬಿಗೆ ಡೇಲ್ ಸ್ಟೇನ್ ಬಲ ?
ಆರ್ಸಿಬಿಗೆ ಸೌತ್ ಆಫ್ರಿಕಾದ ಸ್ಟಾರ್ ಬೌಲರ್ ಡೇಲ್ ಸ್ಟೇನ್ ಬಲ ತುಂಬಲಿದ್ದಾರೆ ಎಂದು ಹೇಳಲಾಗುತ್ತಿದೆ. ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಸ್ಟೇನ್ ಅನ್ಸೋಲ್ಡ್ ಆದ ಆಟಗಾರ, ವೇಗಿ ಡೇಲ್ ಸ್ಟೇನ್ ಐಪಿಎಲ್ ಫ್ರಾಂಚೈಸಿ ಸೇರ್ಪಡೆಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಯಾವ ಫ್ರಾಂಚೈಸಿ ಅಂತ, ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ಸೋಶಿಯಲ್ ಮೀಡಿಯಾಗಳಲ್ಲಿ ಡೇಲ್ ಸ್ಟೇನ್, ಆರ್ಸಿಬಿ ತಂಡಕ್ಕೆ ಸೇರ್ಪಡೆಯಾಗ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸದ್ಯ ಆರ್ಸಿಬಿಗೆ ಮಾತ್ರ ವಿದೇಶಿ ಆಟಗಾರನ ಅವಶ್ಯಕತೆ ಇದೆ.

ಏನೇ ಆಗಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ಇಂದಾದ್ರು ಗೆಲುವಿನ ಖಾತೆ ತೆರೆಯುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ