ಬಳ್ಳಾರಿ, ಏ.12-ಲೋಕಸಭೆ ಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ತರಬೇತಿ ನೀಡುವಾಗ ಶಿಕ್ಷಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಇಲ್ಲಿ ನಡೆದಿದೆ.
ನಿನ್ನೆ ಮಧ್ಯಾಹ್ನ ಸಿರುಗಪ್ಪಂ ನಗರದ ವಿವೇಕಾನಂದ ಶಾಲೆಯಲ್ಲಿ ತರಬೇತಿ ನಡೆಯುತ್ತಿತ್ತು. ಈ ವೇಳೆ ಪೋಲಿಂಗ್ ಆಫೀಸರ್ ಆಗಿ ನಿಯುಕ್ತಿಗೊಂಡಿದ್ದ ಬಿ.ರಮೇಶ್(46) ಎಂಬುವರಿಗೆ ಹೃದಯಾಘಾತವಾಗಿದೆ. ಎದೆ ನೋವು ತಾಳಲಾರದೆ ಕುಸಿದು ಬಿದ್ದಿದ್ದಾರೆ.
ತಕ್ಷಣ ಅವರನ್ನು ವೈದ್ಯರು ಪರೀಕ್ಷಿಸಿದರೂ ಪ್ರಯೋಜನವಾಗಲಿಲ್ಲ. ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎಂದು ಸಹೋದ್ಯೋಗಿಗಳು ತಿಳಿಸಿದ್ದಾರೆ.
ರಮೇಶ್ ಅವರು ಸರ್ಕಾರಿ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿದ್ದು, ತೆಕ್ಕಲಕೋಟೆ ಗ್ರಾಮದಲ್ಲಿ ವಾಸವಾಗಿದ್ದರು.
ಬೆಳಿಗ್ಗೆಯಿಂದ ಲವಲವಿಕೆಯಿಂದ ತರಬೇತಿಯಲ್ಲಿ ಪಾಲ್ಗೊಂಡಿದ್ದರು. ದಿಢೀರನೆ ಈ ಘಟನೆಯಿಂದ ಸಿಬ್ಬಂದಿಗಳಲ್ಲಿ ದುಗುಡಕ್ಕೆ ಕಾರಣವಾಯಿತು.