ಮಂಡ್ಯ: ಮೈತ್ರಿ ಅಭ್ಯರ್ಥಿ ಪರ ನಾವು ಪ್ರಚಾರ ನಡೆಸುವುದಿಲ್ಲ. ನಮ್ಮ ಬೆಂಬಲ ಏನಿದ್ದರೂ ಸುಮಲತಾ ಪರ. ಹೈ ಕಮಾಂಡ್ ಯಾವುದೇ ತೀರ್ಮಾನ ತೆಗೆದುಕೊಂಡರು ಅಷ್ಟೇ ಎಂಬ ಮಾತನ್ನು ಮಂಡ್ಯ ರೆಬೆಲ್ ನಾಯಕ ಚೆಲುವರಾಯ ಸ್ವಾಮಿ ಮತ್ತೊಮ್ಮೆ ಪುನರ್ಉಚ್ಚರಿಸಿದ್ದಾರೆ.
ಇಂದು ಮಂಡ್ಯದಲ್ಲಿ ದೇವೇಗೌಡರ ಜೊತೆ ಪ್ರಚಾರಕ್ಕೆ ಮುಂದಾಗಿರುವ ಸಿದ್ದರಾಮಯ್ಯ ಇದಕ್ಕೂ ಮುನ್ನ ಮಂಡ್ಯ ರೆಬೆಲ್ ನಾಯಕರಾದ ಚೆಲುವರಾಯಸ್ವಾಮಿ, ನರೇಂದ್ರಸ್ವಾಮಿ, ರಮೇಶ್ ಬಂಡಿಸಿದ್ದೇಗೌಡ, ರವಿ ಗಣಿಗ,ಚಂದ್ರಶೇಖರ್, ಮಧು ಮಾದೇಗೌಡ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಕೂಡ ಮೈತ್ರಿ ಅಭ್ಯರ್ಥಿ ಬೆಂಬಲಿಸಿ ಪ್ರಚಾರದಲ್ಲಿ ಭಾಗಿಯಾಗುವಂತೆ ಸಿದ್ದರಾಮಯ್ಯ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರ ಬದಲಿಗೆ ಆರೋಗ್ಯದ ನೆಪ ಹೇಳಿ ಚೆಲುವರಾಯಸ್ವಾಮಿ ಪ್ರಚಾರಕ್ಕೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಸಿಟ್ಟಾದ ಸಿದ್ದರಾಮಯ್ಯ ಅಲ್ರೀ ಹೈಕಮಾಂಡ್ ಸೂಚನೆಯನ್ನ ಧಿಕ್ಕರಿಸುತ್ತಿದ್ದೀರಿ? ನನ್ನ ಮಾತಿಗೂ ಬೆಲೆ ಕೊಡಲ್ಲ ಅಂದ್ರೆ ಏನರ್ಥ ಎಂದು ಧ್ವನಿ ಏರಿಸಿದ್ದಾರೆ. ನಾನು ಹೊರಟೆ, ಆದ್ರೆ ನನ್ನ ಜೊತೆ ಬಾ. ಇಲ್ಲವಾದಲ್ಲಿ ಹೆಲಿಪ್ಯಾಡ್ನಲ್ಲಿ ಸಿಗುತ್ತೇನೆ ಎಂದಿದ್ದಾರೆ.
ಈ ವೇಳೆ ಉತ್ತರಿಸಿರುವ ಚೆಲುವರಾಯಸ್ವಾಮಿ ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿರುತ್ತೇನೆ ಎಂದಿದ್ದಾರೆ. ಈ ಮಾತುಕತೆ ಬಳಿಕ ನೇರವಾಗಿ ಹೆಲಿಪ್ಯಾಡ್ಗೆ ಬರುವಂತೆ ತಿಳಿಸಿರುವದನ್ನು ನೋಡಿದರೆ ಅಂತಿಮವಾಗಿ ಹೆಲಿಪ್ಯಾಡ್ ನಲ್ಲಿ ನಡೆಯುವ ಮಾತುಕತೆ ಮೇಲೆ ಎಲ್ಲವೂ ನಿಂತಿದೆ ಎನ್ನಲಾಗಿದೆ.
ಈಗಾಗಲೇ ಎರಡು ಮೂರು ಬಾರಿ ರೆಬೆಲ್ ನಾಯಕರ ಸಿಟ್ಟು ಶಮನಕ್ಕೆ ಮುಂದಾದರೂ ಪ್ರಯೋಜನವಾಗಿರಲಿಲ್ಲ. ಇನ್ನು ಯುಗಾದಿ ಹಬ್ಬದ ರಾತ್ರಿಯೇ ಮಂಡ್ಯ ಕಾಂಗ್ರೆಸ್ ನಾಯಕರನ್ನು ಕರೆದು ಮೈತ್ರಿ ಧರ್ಮ ಪಾಲಿಸಿ, ಇಲ್ಲವಾದಲ್ಲಿ ಇದು ದೇಶಕ್ಕೆ ತಪ್ಪು ಸಂದೇಶ ನೀಡುತ್ತದೆ ಎಂದು ಮನವರಿಕೆ ಮಾಡಿದ್ದರು. ಆದರೂ ಕೂಡ ಜೆಡಿಎಸ್ ಅಭ್ಯರ್ಥಿ ಪರ ನಮ್ಮ ಬೆಂಬಲವಿಲ್ಲ, ನಮಗೆ ಮಾನ ಮಾರ್ಯದೆ ಇಲ್ಲವಾ ಎಂಬ ಮಾತುಗಳು ಕೂಡ ಕೇಳಿ ಬಂದಿತು.
ಇನ್ನು ಕಳೆದೆರಡು ದಿನಗಳಿಂದ ಮಗನ ಪರ ಪ್ರಚಾರ ನಡೆಸಿದ್ದ ಕುಮಾರಸ್ವಾಮಿ ಅವರು ಕೂಡ ಕಾಂಗ್ರೆಸ್ ಅತೃಪ್ತ ನಾಯಕರ ವಿರುದ್ಧ ಬಹಿರಂಗವಾಗಿ ಸಿಟ್ಟು ಹೊರಹಾಕಿದ್ದರು. ನಮ್ಮ ಪಕ್ಷದಲ್ಲಿಯೇ ಇದ್ದ ಅವರು ಈಗ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ನಿಖಿಲ್ ಸೋಲಿಸುವ ಮೂಲಕ ನನ್ನನ್ನು ಅವಮಾನ ಮಾಡುವುದು ಸರ್ಕಾರ ಬೀಳಿಸುವುದು ಅವರ ಉದ್ದೇಶ ಎಂದು ಬಹಿರಂಗ ಆಕ್ರೋಶ ವ್ಯಕ್ತಪಡಿಸಿದ್ದರು.