ಮೊದಲ ಹಂತದ ಚುನಾವಣೆ; 91 ಕ್ಷೇತ್ರದಲ್ಲಿ ದಾಖಲಾಯ್ತು ಶೇ.65 ಮತದಾನ..!

ನವದೆಹಲಿಗುರುವಾರ ನಡೆದ ಮೊದಲ ಹಂತದ ಲೋಕಸಭಾ ಸಮರದಲ್ಲಿ ದೇಶದ 91 ಹಾಗೂ ಅಂಧ್ರಪ್ರದೇಶ, ಸಿಕ್ಕಿಂ, ಅರುಣಾಚಲ ಪ್ರದೇಶ, ಒದಿಶಾ ರಾಜ್ಯಗಳ 296 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟಾರೆ ನಡೆಸಲಾದ ಚುನಾವಣೆಯಲ್ಲಿ  ಶೇ. 65 ರಷ್ಟು ಮತದಾನ ದಾಖಲಾಗಿದೆ.

ದೇಶದಾದ್ಯಂತ 543 ಲೋಕಸಭಾ ಕ್ಷೇತ್ರಗಳ ಚುನಾವಣೆಯು ಏಪ್ರಿಲ್ 11 ರಿಂದ ಮಾರ್ಚ್.19 ರ ವರೆಗೆ ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಈ ಪೈಕಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ18 ರಾಜ್ಯ, 2 ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 91 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗಿತ್ತು.

ಈ ಪೈಕಿ ಆಂಧ್ರಪ್ರದೇಶದ 25, ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರಿನ 4, ಛತ್ತೀಸ್​ಘಡದ 1, ಕಾಶ್ಮೀರದ 1, ಮಹಾರಾಷ್ಟ್ರದ 7, ಮಣಿಪೂರ್​ನ 1, ತೆಲಂಗಾಣದ 17, ತ್ರಿಪುರದ 1, ಉತ್ತರಪ್ರದೇಶದ 8, ಉತ್ತರಾಖಂಡ್​ನ 5, ಪಶ್ಚಿಮ ಬಂಗಾಳದ 2, ಲಕ್ಷ ದ್ವೀಪದ 1 ಹಾಗೂ ಅಂಡಮಾನ್ ನಿಕೋಬಾರ್​ನ 1 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಬಂಗಾಳದಲ್ಲಿ ದಾಖಲೆಯ ಮತದಾನ : ಮೊದಲ ಹಂತದ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಮತ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಶೇ. 80.09 ರಷ್ಟು ಮತ ದಾಖಲಾಗಿದ್ದರೆ, ಶೇ. 50.3 ರಷ್ಟು ಮತ ದಾಖಲಾಗುವ ಮೂಲಕ  ಅತಿ ಕಡಿಮೆ ಮತ ದಾಖಲಾದ ಪ್ರದೇಶ ಎಂಬ ಹಣೆಪಟ್ಟಿಯನ್ನು ಬಿಹಾರ ಮತ್ತೆ ತನ್ನಲ್ಲೇ ಉಳಿಸಿಕೊಂಡಿದೆ.

ಪ್ರತ್ಯೇಕತಾವಾದಿಗಳು ಕರೆ ನೀಡಿದ್ದ ಬಂದ್​ ನಡುವೆಯೂ ಜಮ್ಮು-ಕಾಶ್ಮೀರದಲ್ಲಿ ಶಾಂತಿಯುತ ಮತದಾನ ನಡೆದಿದ್ದು ಶೇ.72 ರಷ್ಟು ಮತದಾನ ದಾಖಲಾಗಿರುವುದು ಅಚ್ಚರಿಗೆ ಕಾರಣವಾಗಿದೆ.

ಈಶಾನ್ಯ ರಾಜ್ಯಗಳಾದ ತ್ರಿಪುರ, ನಾಗಾಲ್ಯಾಂಡ್, ಮಣಿಪುರ್ ಹಾಗೂ ಸಿಕ್ಕಿಂ ರಾಜ್ಯಗಳಲ್ಲಿ ಶೇ.80 ರಷ್ಟು ಮತದಾನವಾಗಿದ್ದರೆ. ಅರುಣಾಚಲ ಪ್ರದೇಶದಲ್ಲಿ ಶೇ.79.01 ರಷ್ಟು ಮತದಾನವಾಗಿದೆ. ಮೇಘಾಲಯದಲ್ಲಿ ಶೇ.60 ರಷ್ಟು ಮತಗಳು ದಾಖಲಾಗಿವೆ.

ದೇಶದಲ್ಲೇ ಅತ್ಯಂತ ದೊಡ್ಡ ರಾಜ್ಯ ಎನಿಸಿಕೊಂಡ ಉತ್ತರಪ್ರದೇಶದ 8 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ.59.08 ರಷ್ಟು ಮತದಾನವಾಗಿದೆ. ಈ ಭಾಗಗಳಲ್ಲಿ ಕಳೆದ ಬಾರಿ ಶೇ. 74 ರಷ್ಟು ಮತದಾನವಾಗಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಮತದಾನದ ಪ್ರಮಾಣ ನಿರೀಕ್ಷೆಗಿಂತ ಕಡಿಮೆಯಾಗಿರುವುದು ಎಸ್​ಪಿ-ಬಿಎಸ್​ಪಿ ಮೈತ್ರಿಯನ್ನು ಆತಂಕಕ್ಕೆ ಈಡುಮಾಡಿದೆ.

ಆಂಧ್ರಪ್ರದೇಶದ 175 ವಿಧಾನಸಭೆ ಹಾಗೂ 25 ಲೋಕಸಭೆಗೆ ಒಟ್ಟಿಗೆ ನಡೆಸಲಾದ ಚುನಾವಣೆಯಲ್ಲಿ ಶೇ.66 ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ.78.08 ರಷ್ಟು ಮತದಾನವಾಗಿತ್ತು. ಕಳೆದ ಬಾರಿಯ ಶೇಕಡಾವಾರು ಮತದಾನಕ್ಕೆ ಹೋಲಿಸಿದರೆ ಈ ಬಾರಿಯ ಮತದಾನ ಅತ್ಯಂತ ಕಡಿಮೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಆಂಧ್ರದಲ್ಲಿ ಮತದಾನದ ಪ್ರಮಾಣ ಹಿಂದಿನ ಸರಾಸರಿ ಪ್ರಮಾಣಕ್ಕಿಂತ ಕಡಿಮೆಯಾಗಲು 150 ಮತಗಟ್ಟೆಗಳಲ್ಲಿ 350ಕ್ಕೂ ಹೆಚ್ಚು ಮತಯಂತ್ರಗಳಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷ ಹಾಗೂ ಅಲ್ಲಲ್ಲಿ ವೈಎಸ್​ಆರ್ ಕಾಂಗ್ರೆಸ್ ಹಾಗೂ ಟಿಡಿಪಿ ಪಕ್ಷಗಳ ಕಾರ್ಯಕರ್ತರ ನಡುವೆ ನಡೆದ ಮಾರಾಮಾರಿಯೇ ಕಾರಣ ಎನ್ನಲಾಗುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ