ನವದೆಹಲಿ: ಭಾರತೀಯ ಸೇನೆ ನಡೆಸುವ ಕಾರ್ಯಾಚರಣೆಯನ್ನು ರಾಜಕಾರಣಿಗಳು ಮತಬೇಟೆಗೆ ಬಳಕೆ ಮಾಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಾಜಿ ಸೈನಿಕರು ರಾಷ್ಟ್ರಪತಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತು ರಾಷ್ಟ್ರಪತಿ ಭವನದ ಮೂಲಗಳು ಸ್ಪಷ್ಟನೆ ನೀಡಿದ್ದು, ನಮಗೆ ಇಂತಹ ಯಾವುದೇ ಪತ್ರ ಬಂದಿಲ್ಲವೆಂದು ತಿಳಿಸಿದೆ.
ಸಶಸ್ತ್ರ ಪಡೆಯ ಎಂಟು ಮಾಜಿ ಮುಖ್ಯಸ್ಥರು ಸೇರಿದಂತೆ ಸುಮಾರು 150 ಮಾಜಿ ಸೈನಿಕರು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಪತ್ರ ಬರೆದಿದ್ದರು ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಅಲ್ಲದೆ, ಮಾಜಿ ಸೈನಿಕರೇ ಬರೆದಿದ್ದಾರೆ ಎನ್ನಲಾದ ಪತ್ರವೊಂದರ ಪ್ರತಿ ಸಹ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆದರೆ, ಮಾಜಿ ಸೈನಿಕರು ಬರೆದಿದ್ದಾರೆ ಎನ್ನಲಾದ ಅಂತಹ ಯಾವುದೇ ಪತ್ರವೂ ಬಂದಿಲ್ಲವೆಂದು ರಾಷ್ಟ್ರಪತಿ ಭವನದ ಮೂಲಗಳು ಮಾಹಿತಿ ನೀಡಿವೆ. ಅಲ್ಲದೆ, ಆ ಪತ್ರದಲ್ಲಿ ಮೊದಲ ಹೆಸರು ಜನರಲ್ ಎಸ್.ಎಫ್.ರೊಡ್ರಿಗಸ್ರವರ ಹೆಸರಿದ್ದು, ಅವರು ಸಹ ತಾವು ಇಂತಹ ಯಾವುದೇ ಪತ್ರಕ್ಕೆ ಸಹಿ ಮಾಡಿಲ್ಲ. ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಪಕ್ಷದ ಕಾರ್ಯಕರ್ತರು ಸೈನಿಕರ ಸಮವಸ್ತ್ರ ಧರಿಸುತ್ತಿರುವುದು, ಪಕ್ಷದ ಪೋಸ್ಟರ್ಗಳಲ್ಲಿ ಸೈನಿಕರ ಚಿತ್ರಗಳನ್ನು ಬಳಕೆ ಮಾಡುತ್ತಿರುವುದು, ಪ್ರಮುಖವಾಗಿ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಹೆಸರು ಮತ್ತು ಚಿತ್ರ ಬಳಕೆ ಮಾಡುತ್ತಿರುವುದರ ಬಗ್ಗೆ ಕೋವಿಂದ್ ಅವರಿಗೆ ಬರೆದ ಪತ್ರದಲ್ಲಿ ಗಮನ ಸೆಳೆದಿದ್ದಾರೆ ಎನ್ನಲಾಗಿತ್ತು. ಭಾರತೀಯ ಸೈನಿಕರ ಕಾರ್ಯಚರಣೆಯನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವುದರ ಬಗ್ಗೆ ಚುನಾವಣೆ ಆಯೋಗದ ಗಮನ ಸೆಳೆದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಾಜಕೀಯ ಪಕ್ಷಗಳು ಭಾರತೀಯ ಸೇನೆಯನ್ನು ಪ್ರಚಾರದ ವೇಳೆ ಬಳಕೆ ಮಾಡುತ್ತಿರುವುದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಪತ್ರದಲ್ಲಿ ಮಾಜಿ ಸೈನಿಕರು ವಿವರಿಸಿದ್ದಾರೆ ಎಂದು ತಿಳಿದುಬಂದಿತ್ತು.
Rashtrapati Bhavan Source denies receiving any letter supposedly written by armed forces veterans to the President which is circulating in the media.