ಪ್ರಧಾನಿ ಮೋದಿ ಜನಪರವಾದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ-ಸಚಿವ ವೆಂಕಟರಾವ್ ನಾಡಗೌಡ

ವಿಜಯಪುರ,ಏ.12- ಕೇವಲ ಕಾರ್ಪೊರೇಟ್ ಕಂಪನಿಗಳ ಪರ ಕೆಲಸ ಮಾಡುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಾರಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಪಶುಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಟ್ಟ ಭರವಸೆಯನ್ನು ಮೋದಿ ಈಡೇರಿಸಿಲ್ಲ. ಜನಪರವಾದ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ರೈತರ ಸಾಲ ಮನ್ನಾ ಮಾಡದ ಇವರು, ಕಾರ್ಪೊರೇಟ್ ಕಂಪನಿಗಳ ಲಕ್ಷಾಂತರ ಕೋಟಿ ಮನ್ನ ಮಾಡಿದ್ದಾರೆ. ಕೋಮುವಾದಿ ಶಕ್ತಿಯ ವಿರುದ್ಧ ಹೋರಾಡಲು ಕಾಂಗ್ರೆಸ್ ಜೊತೆಗೂಡಿ ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ.ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದೇವೆ. ಇಲ್ಲಿನ ಮೈತ್ರಿ ಅಭ್ಯರ್ಥಿ ಡಾ.ಸುನೀತಾ ಚೌವ್ಹಾಣ್ ಗೆಲ್ಲುವ ವಿಶ್ವಾಸವಿದೆ ಎಂದರು.

ಮೋದಿಯವರು ಚುನಾವಣಾ ಪ್ರಚಾರದಲ್ಲಿ ಪ್ರಣಾಳಿಕೆ ಕುರಿತು ಎಲ್ಲೂ ಮಾತನಾಡುವುದಿಲ್ಲ. ಕಳೆದ ಚುನಾವಣೆಯ ಪ್ರಣಾಳಿಕೆಯ ಭರವಸೆ ಒಂದೂ ಈಡೇರಿಸಿಲ್ಲ. ಸ್ವಾಮಿನಾಥನ್ ವರದಿ ಜಾರಿಗೆ ಬರಲಿಲ್ಲ. ಕಪ್ಪು ಹಣ ತರಲಿಲ್ಲ. ಉದ್ಯೋಗ ಸೃಷ್ಠಿ ಮಾಡಲಿಲ್ಲ ಎಂದು ಆರೋಪಿಸಿದರು.

ನೋಟ್ ಬ್ಯಾನ್ ಮಾಡಿ ಜಿಎಸ್‍ಟಿ ತಂದು ಜನರಿಗೆ ಸಾಕಷ್ಟು ತೊಂದರೆ ಮಾಡಿದರು.ಐದು ವರ್ಷದ ಅಭಿವೃದ್ಧಿ ಕುರಿತು ಮಾತನಾಡದ ಮೋದಿಯವರಿಗೆ ಏಕೆ ಮತ ಹಾಕಬೇಕು ಎಂದು ಜನ ಕೇಳುತ್ತಿದ್ದಾರೆ.ಇಲ್ಲಿನ ಸಂಸದರು ಯಾವುದೇ ಅಭಿವೃದ್ಧಿ ಮಾಡಿಲ್ಲ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಗೊಳಿಸುವಲ್ಲಿ ವಿಫಲವಾಗಿದ್ದಾರೆ.1500 ಕೋಟಿ ರೂ.ನರೇಗಾ ಹಣ ಬಾಕಿ ಇದೆ.ಮಾಧ್ಯಮಗಳಲ್ಲಿ ಬಂದ ಹಾಗೆ ಮೋದಿ ಅಲೆ ದೇಶದಲ್ಲಿ ಎಲ್ಲೂ ಇಲ್ಲ. ಈ ಬಾರಿ ವಿಜಯಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ಖಚಿತ ಎಂದು ಹೇಳಿದರು.

ನನ್ನ ಇಲಾಖೆಯಿಂದಲೇ ಪ್ರತಿ ವರ್ಷ 2 ಸಾವಿರ ಕೋಟಿ ಹಾಲಿನ ಸಬ್ಸಿಡಿ ನೀಡಿದ್ದೇವೆ. 170 ಕೋಟಿ ಮೀನುಗಾರರ ಡೀಸೆಲ್‍ಗೆ ಸಬ್ಸಿಡಿ ನೀಡಿದ್ದೇವೆ. ನಾಪತ್ತೆಯಾದ ಮೀನುಗಾರರ ಕುಟುಂಬಕ್ಕೆ 1 ಲಕ್ಷ ರೂ.ತಾತ್ಕಾಲಿಕ ಪರಿಹಾರ ನೀಡಲಾಗಿದೆ. ಮೀನುಗಾರರ ನಾಪತ್ತೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಅವರ ಮನೆಗಳಿಗ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೋಗಿಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ