ಚುನಾವಣೆಯ ನಂತರ ಮೈತ್ರಿ ಸರ್ಕಾರ ಪತನ-ಮಾಜಿ ಸಿ.ಎಂ.ಯಡಿಯೂರಪ್ಪ

ಹುಬ್ಬಳ್ಳಿ,ಏ.12- ಸಮ್ಮಿಶ್ರ ಸರ್ಕಾರ ಕೋಮಾ ಸ್ಥಿತಿಯಲ್ಲಿದ್ದು, ಯಾವಾಗ ಸಾಯುತ್ತದೆಯೋ ಗೊತ್ತಿಲ್ಲ. ಚುನಾವಣೆಯ ನಂತರ ಇರುವುದಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಸದ್ಯ ಐಸಿಯುನಲ್ಲಿದೆ. ಚುನಾವಣೆಯ ನಂತರ ಪತನವಾಗುತ್ತದೆ. ಪರಸ್ಪರ ಕಚ್ಚಾಡುವುದನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಅವರು ತಿಳಿಸಿದರು.

ರಾಜ್ಯದ ಜನತೆ ಈ ಸರ್ಕಾರದ ವಿರುದ್ಧ ಬೇಸತ್ತಿದ್ದಾರೆ. ಹಾಗಾಗಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಐದು ವರ್ಷಗಳ ಕಾಲ ದೇಶದಲ್ಲಿ ಬಲಿಷ್ಠ ಸರ್ಕಾರವನ್ನು ಪ್ರಧಾನಿ ನರೇಂದ್ರ ಮೋದಿಯವರು ನೀಡಿದ್ದು, ಅಮೆರಿಕ, ದ.ಕೊರಿಯಾ ಮುಂತಾದ ದೇಶಗಳು ಅವರಿಗೆ ಬಿರುದು ನೀಡಿ ಸನ್ಮಾನಿಸಿದ್ದಾರೆ.ಅವರು ಮತ್ತೆ ಪ್ರಧಾನಿಯಾಗಲಿದ್ದಾರೆ.ಮೋದಿಯವರು ಪ್ರಣಾಳಿಕೆಯಲ್ಲಿ ನದಿ ಜೋಡಣೆಗೆ ಒತ್ತು ನೀಡಿದ್ದಾರೆ ಎಂದು ಹೇಳಿದರು.

ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಸಿಲಿಂಡರ್ ಗ್ಯಾಸ್ ನೀಡಿದ್ದು, ಮುದ್ರಾ ಯೋಜನೆಯಡಿ 8 ಕೋಟಿ ಸಾಲ ನೀಡಿಕೆ, 40 ಲಕ್ಷದವರೆಗೆ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿ ಸೇರಿದಂತೆ ರೈತರಿಗೆ ಅನೇಕ ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಎಂದರು.

ಪುಲ್ವಾಮಾ ದಾಳಿ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಹೇಳಿಕೆ ನೈತಿಕ ಅಧಃಪತನದ ಪ್ರತೀಕವಾಗಿದೆ.ಮಾಧ್ಯಮದವರ ಮೇಲೆ ಹಲ್ಲೆಯಾದರೆ ನಾನು ಹೊಣೆಯಲ್ಲ ಎಂದಿರುವುದು ನಾಚಿಕೆಗೇಡು.ಮಂಡ್ಯ ಸೋಲಿನ ಹತಾಶೆಯಿಂದ ಈ ರೀತಿ ಹೇಳಿಕೆ ನೀಡಿದ್ದಾರೆ.ನಾವು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದೇವೆ ಎಂದು ಹೇಳಿದರು.ಮಂಡ್ಯದಲ್ಲಿ ಸುಮಲತಾ ಅವರ ಜಯ ಖಚಿತ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆದಾಯ ತೆರಿಗೆ ದಾಳಿ ದಾಖಲೆಗಳನ್ನು ಪರಿಶೀಲಿಸಿ ನಡೆಯುತ್ತದೆ.ಬಿಜೆಪಿಯ ಅನೇಕ ನಾಯಕರ ಮನೆ ಮೇಲು ದಾಳಿಯಾಗಿದೆ.ನಾವು ಬೀದಿಗಿಳಿದು ಹೋರಾಟ ಮಾಡಿಲ್ಲ ಎಂದರು.

ಕುಂದಗೋಳ ಉಪಚುನಾವಣೆ ಸಂಬಂಧ ಪಕ್ಷದ ನಾಯಕರ ಜೊತೆ ಚರ್ಚೆ ನಡೆಸುತ್ತೇವೆ. ಧರ್ಮ ಒಡೆದವರು ಸದ್ಯ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ತಿಳಿಸಿದರು.
ನಿಂಬೆಹಣ್ಣು ಇಟ್ಟುಕೊಂಡು ಲೆಕ್ಕ ಹೇಳುವವರು ಸಚಿವ ರೇವಣ್ಣ ಎಂದು ವ್ಯಂಗ್ಯವಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ