ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ ಪೆನ್ ಡ್ರೈವ್ ಸಂಕಷ್ಟ ಎದುರಾಗಿದೆ.
ಯಡಿಯೂರಪ್ಪಗೆ ಸಂಬಂಧಿಸಿದ ಡೈರಿ, ಪೆನ್ ಡ್ರೈವ್ ಅನ್ನು ತನಿಖಾಧಿಕಾರಿ ನ್ಯಾಯಾಲಯದ ಮುಂದೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಡೈರಿ, ಪೆನ್ ಡ್ರೈವ್ ನೀಡಲು ಈಶ್ವರಪ್ಪ ಆಪ್ತ ವಿನಯ್ ಒಪ್ಪಿಕೊಂಡಿದ್ದು, ನನಗೆ ಭದ್ರತೆ ಕೊಟ್ಟರೆ ಮಾತ್ರ ಪೆನ್ ಡ್ರೈವ್ ನೀಡುತ್ತೇನೆ ಎಂದು ಹೇಳಿದ್ದಾರೆ ಎನ್ನಲಾಗಿದೆ.
ವಿನಯ್ ಬಳಿ ಯಡಿಯೂರಪ್ಪಗೆ ಸಂಬಂಧಪಟ್ಟ ಡೈರಿಯ ಅಸಲಿ ಪೆನ್ ಡ್ರೈವ್ ಇದೆಯಂತೆ. ರಾಜ್ಯ ಪೊಲೀಸರು ಭದ್ರತೆಯನ್ನು ನೀಡಿದರೆ ತನಿಖಾಧಿಕಾರಿ ಅಥವಾ ನ್ಯಾಯಾಲಯಕ್ಕೆ ಡೈರಿ ನೀಡುತ್ತೇನೆ ಎಂದು ತೀರ್ಮಾನ ಮಾಡಿದ್ದಾರೆ. ನನ್ನ ಬಳಿ ಪ್ರಮುಖ ಸಾಕ್ಷ್ಯಾಧಾರಗಳು ಇವೆ. ಅದನ್ನು ನಾನು ನ್ಯಾಯಾಲಯದ ಮುಂದೆ ಇಡಬೇಕು. ಆ ಸಾಕ್ಷ್ಯ ಬಯಲಾದ ಬಳಿಕ ನನ್ನ ಜೀವಕ್ಕೆ ಕುತ್ತು ಬರುತ್ತದೆ. ಈ ಹಿನ್ನೆಲೆಯಲ್ಲಿ ಭದ್ರತೆ ನೀಡುವಂತೆ ಇಂದು ಅಮೃತಹಳ್ಳಿ ಪೊಲೀಸ್ ಠಾಣೆಯ ಪೊಲೀಸರಿಗೆ ಪತ್ರ ನೀಡಿ ವಿನಯ್ ಮನವಿ ಮಾಡಿಕೊಳ್ಳಲಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವಿನಯ್, ಯಡಿಯೂರಪ್ಪ ಅವರ ಪಿಎ ಸಂತೋಷ್ ನನ್ನನ್ನು ಕಿಡ್ನಾಪ್ ಮಾಡಿ ವಿಫಲವಾಗಿದ್ದನು. ಬಳಿಕ ಆತ ಪೊಲೀಸ್ ಠಾಣೆಗೆ ಕೆಲವು ಅಗತ್ಯವಾದ ಮಾಹಿತಿ, ಪೆನ್ಡ್ರೈವ್ ಇದಕ್ಕೋಸ್ಕರ ಕಿಡ್ನಾಪ್ ಮಾಡಿಸಿದೆ ಎಂದು ಹೇಳಿಕೆ ಕೊಟ್ಟಿದ್ದನು. ಈ ಆಧಾರದ ಮೇಲೆ ಪೊಲೀಸರು ನನಗೆ ಒಂದು ನೋಟಿಸ್ ನೀಡಿದ್ದರು ಎಂದು ಹೇಳಿದ್ರು.
ನಿಮ್ಮ ಬಳಿ ಯಾವುದಾದರೂ ದಾಖಲಾತಿ ಇದ್ದರೆ ಅದನ್ನು ನಮಗೆ ಕೊಡಿ ಎಂದು ನೋಟಿಸ್ನಲ್ಲಿ ಕೇಳಿದ್ದಾರೆ. ಹೀಗಾಗಿ ನನ್ನ ಬಳಿಯಿರುವ ದಾಖಲಾತಿ, ಪೆನ್ಡ್ರೈವನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಕೊಡಲು ತೀರ್ಮಾನ ಮಾಡಿದ್ದೇನೆ. ಆದರೆ ಸೂಕ್ತ ದಾಖಲೆ ಕೊಡಲು ಪೊಲೀಸ್ ಭದ್ರತೆ ಒದಗಿಸಬೇಕು ಎಂದು ಪೊಲೀಸರ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಆದರೆ ತನಿಖೆಯಲ್ಲಿರುವ ವಿಚಾರದ ವೇಳೆ ಮಾಹಿತಿಯನ್ನು ಬಹಿರಂಗ ಪಡಿಸಲು ಸಾಧ್ಯವಿಲ್ಲ. ಸಂತೋಷ್ ಕಿಡ್ನಾಪ್ ಮಾಡಿರುವ ಕುರಿತು ಪೆನ್ ಡ್ರೈವ್ ನಲ್ಲಿ ಇದೆ. ಬೇರೆ ವಿಚಾರ ನನಗೆ ಗೊತ್ತಿಲ್ಲ ಎಂದು ತಿಳಿಸಿದ್ರು.
ಪೊಲೀಸ್ ಭದ್ರತೆ ಏಕೆ?
ಈಗಾಗಲೇ ಒಮ್ಮೆ ನಮ್ಮ ಮೇಲೆ ಹಲ್ಲೆ ನಡೆದಿದೆ. ಈಗ ಅಪರಿಚಿತ ವ್ಯಕ್ತಿಗಳು ಓಡಾಡುತ್ತಿದ್ದಾರೆ. ಪಿಎ ಸಂತೋಷ್ ಇನ್ನೂ ಕೂಡ ಯಡಿಯೂರಪ್ಪ ಅವರ ಬಳಿಯೇ ಇದ್ದಾರೆ. ಹೀಗಾಗಿ ಅವರು ಮತ್ತೆ ನನ್ನ ಮೇಲೆ ಹಲ್ಲೆ ಮಾಡುವ ಅನುಮಾನ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಭದ್ರತೆ ಕೋರಿರುವುದಾಗಿ ತಿಳಿಸಿದ್ದಾರೆ.