ಬೆಂಗಳೂರು, ಏ.12-ಅಪ್ಪಾಜಿ-ಅಮ್ಮನಿಗೆ ನಾವು ಮೂವರು ಅಣ್ಣ ತಮ್ಮಂದಿರು ಒಟ್ಟಿಗೆ ಒಂದೇ ಚಿತ್ರದಲ್ಲಿ ಅಭಿನಯಿಸಬೇಕೆಂಬ ಆಸೆಯಿತ್ತು. ಉತ್ತಮ ನಿರ್ದೇಶಕರು ಸಿಕ್ಕರೆ ಖಂಡಿತ ನಾವು ಒಟ್ಟಿಗೆ ಅಭಿನಯಿಸುತ್ತೆವೆ ಎಂದು ಪುನೀತ್ ರಾಜ್ಕುಮಾರ್ ಇಂದಿಲ್ಲಿ ತಿಳಿಸಿದರು.
ಕಂಠೀರವ ಸ್ಟುಡಿಯೊದಲ್ಲಿ ರಾಜ್ಕುಮಾರ್ ಪುಣ್ಯಭೂಮಿಯಲ್ಲಿ ರಾಜ್ಕುಮಾರ್ ಅವರ ಪುಣ್ಯತಿಥಿ ಅಂಗವಾಗಿ ನಡೆದ ಕಾರ್ಯಕ್ರಮದಲ್ಲ್ನಿ ಭಾಗವಹಿಸಿ ನಂತರ ಮಾತನಾಡಿದರು.
ನಮ್ಮ ತಂದೆ-ತಾಯಿ ಒಳ್ಳೆ ಬದುಕು ಕಟ್ಟಿಕೊಟ್ಟಿದ್ದಾರೆ. ಆದ್ದರಿಂದಲೇ ಇಂದು ಉತ್ತಮವಾಗಿ ಜೀವನ ರೂಪಿಸಿಕೊಳ್ಳಲು ಸಾಧ್ಯವಾಗಿದೆ.
ಪಿಆರ್ಕೆ ಪ್ರೋಡಕ್ಷನ್ ಮೂಲಕ ಮೊದಲ ಚಿತ್ರವನ್ನು ಇಂದು ಬಿಡುಗಡೆ ಮಾಡಲಾಗಿದೆ. ಇದೇ ಪ್ರೋಡಕ್ಷನ್ನಲ್ಲಿ ಇನ್ನೂ ಸಾಲು ಸಾಲು ಷೂಟಿಂಗ್ ನಡೆಯುತ್ತಿವೆ ಎಂದರು.
ಅಪ್ಪ-ಅಮ್ಮನ ಪ್ರೀತಿ, ವಾತ್ಸಲ್ಯ ಎಂದೂ ಮರೆಯಲು ಸಾಧ್ಯವಿಲ್ಲ. ಜಾಸ್ತಿ ಬೆಲೆಯ ವಸ್ತುಗಳನ್ನು ತಂದರೆ ಅಪ್ಪಾಜಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಅವರಿಗಾಗಿ ದುಬಾರಿಯ ಶೂ ತಂದು ಒಮ್ಮೆ ಕಡಿಮೆ ಬೆಲೆ ಎಂದು ಹೇಳಿ ಕೊಟ್ಟಿದ್ದೆ ಎಂದು ಸ್ಮರಿಸಿದರು.
ಕವಚ ತೊಟ್ಟು ಪ್ರಚಾರಕ್ಕೆ ಬರುತ್ತಾರೆ ಎಂಬ ಕುಮಾರ್ ಬಂಗಾರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಹ್ಯಾಟ್ರಿಕ್ ಹೀರೊ ಶಿವರಾಜ್ಕುಮಾರ್ ಅದು ಅವರ ಅಭಿಪ್ರಾಯ ಅಷ್ಟೆ ಅದಕ್ಕೆ ನಾವು ತಲೆ ಕೆಡಿಸಿಕೊಳ್ಳವುದಿಲ್ಲ.
ನನಗೆ ಅಭಿಮಾನಿಗಳೇ ಕವಚ, ಕರ್ನಾಟಕವೂ ನನಗೆ ಕವಚ ಹಾಗೂ ಕನ್ನಡ ಚಿತ್ರರಂಗ ನನಗೆ ಕವಚದಂತಿದೆ ಅಂತ ಹೇಳುವ ಮೂಲಕ ನಾನು ಕವಚ ಸಿನಿಮಾದ ಪ್ರಚಾರಕ್ಕೆ ಹೋಗಿದ್ದೇವು ಎಂದರು.
ರಾಘಣ್ಣ ಅಪ್ಪನ ಅಂಗಿ ಎಂಬ ಸಿನಿಮಾ ಮಾಡುತ್ತಿದ್ದಾರೆ. ಅಪ್ಪಾಜಿಗೆ ಬಿಳಿ ಬಟ್ಟೆ ಅಂದ್ರೆ ತುಂಬಾ ಇಷ್ಟ ಒಂದೇ ಒಂದು ಬಾರಿ ಜಿನ್ಸ್ ಪ್ಯಾಂಟ್ ಹಾಕಿಸಿ ಏರ್ಪೋರ್ಟ್ ಗೆ ಕರೆದುಕೊಂಡು ಹೋಗಿದ್ದೆ ಎಂದು ನೆನಪಿಸಿಕೊಂಡರು. ಅವರು ಹಾಕುತ್ತಿದ್ದ ಬಟ್ಟೆನೂ ಬಿಳಿ, ಅವರ ಮನಸ್ಸು ಬಿಳಿ ಎಂದು ನುಡಿದರು.
ರಾಘವೇಂದ್ರ ರಾಜ್ಕುಮಾರ್ ಮಾತನಾಡಿ ಅಪ್ಪಾಜಿ ಬಗ್ಗೆ ಇಂದಿಗೂ ಅಭಿಮಾನದಿಂದ ಜನ ಬರುತ್ತಾರೆ. ನಮಗೆ ಇದೊಂದು ದೇವಸ್ಥಾನವಿದ್ದಂತೆ ಎಂದರು.