ಕಲಬುರಗಿ, ಏ.11- ರಾಜ್ಯದ ಸಮ್ಮಿಶ್ರ ಸರ್ಕಾರದ ಎರಡು ಪಕ್ಷಗಳು ದಲಿತರ ಪರವಾಗಿಲ್ಲ ಎಂದು ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯ ಸೇಡಂ ತಾಲೂಕಿನ ಮುಧೋಳದ ಬಿಜೆಪಿ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿನ ಸಮ್ಮಿಶ್ರ ಸರ್ಕಾರದ ಎರಡೂ ಪಕ್ಷಗಳು ದಲಿತರ ಪರ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಎರಡೂ ಪಕ್ಷದ ನಾಯಕರು ದಲಿತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಹೇಳಿದರು.
2014ರಲ್ಲಿಯೇ ನಾನು ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕವಾಗಬೇಕಿತ್ತು. ಆದರೆ, ನನಗೆ ಸುಳ್ಳು ಹೇಳಿ ಮೋಸ ಮಾಡಿ ಆ ಹುದ್ದೆ ನೀಡಲಿಲ್ಲ. ಕಾಟಾಚಾರ ಎನ್ನುವಂತೆ ಚುನಾವಣೆ ಇರುವಾಗ 4 ತಿಂಗಳ ಮಟ್ಟಿಗೆ ಸಿಎಸ್ ಹುದ್ದೆಗೆ ನೇಮಿಸಿದ್ದರು. ಈ ಮೂಲಕ ಹಿಂದಿನ ಸರ್ಕಾರ ದಲಿತ ವಿರೋಧಿ ನೀತಿ ಅನುಸರಿಸಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಅಭ್ಯರ್ಥಿಯಾಗಿರುವ ಉಮೇಶ್ ಜಾದವ್ ಅವರಿಗೆ ಮತ ನೀಡುವ ಮೂಲಕ ಮೋದಿ ಅವರ ಕೈ ಬಲಪಡಿಸುವಂತೆ ಮನವಿ ಮಾಡಿದರು.