ಈ ಬಾರಿ ಬಳ್ಳಾರಿಯಲ್ಲಿ ಕಾಂಗ್ರೇಸ್‍ಗೆ ಗೆಲುವು ಸುಲಭವಲ್ಲ

ಬಳ್ಳಾರಿ, ಏ.11- ಈ ಬಾರಿ ಕಾಂಗ್ರೆಸ್ ಗೆಲುವು ಅಷ್ಟು ಸುಲಭವಲ್ಲ. ಬಳ್ಳಾರಿಯಲ್ಲಿ ಕಾಂಗ್ರೆಸ್‍ಗೆ ಸಾಕಷ್ಟು ಸಂಕಷ್ಟಗಳಿವೆ. ಅಷ್ಟೇ ಎದುರಾಗಳಿಗಳೂ ಇದ್ದಾರೆ.

ಪಕ್ಷದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ, ಅಸಮಾಧಾನಗಳು ಎದುರಾಗಿವೆ. ಈ ಎಲ್ಲ ವಿಷಯಗಳನ್ನು ಅರಿತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಅವರು ಖುದ್ದು ರಣರಂಗಕ್ಕಿಳಿದಿದ್ದಾರೆ.

ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಕೈ ಗೆಲುವಿನ ಸೂತ್ರಧಾರಿಯಾಗಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಈಗ ಬಳ್ಳಾರಿ ಜಿಲ್ಲೆಯಲ್ಲಿ ಹೆಜ್ಜೆ ಹೆಜ್ಜೆಗೂ ಸಂಕಷ್ಟಗಳು ಎದುರಾಗುತ್ತಿವೆ. ಪಕ್ಷದ ಮುಖಂಡರು ಒಗ್ಗಟ್ಟಾಗುತ್ತಿಲ್ಲ. ವೈಮನಸ್ಸನ್ನು ಸರಿಪಡಿಸಲು ನಡೆಸಿದ ಸಭೆಗಳು ಫಲ ನೀಡುತ್ತಿಲ್ಲ. ಪಕ್ಷದ ಅಭ್ಯರ್ಥಿ ಪರ ಒಟ್ಟಾಗಿ ಪ್ರಚಾರ ನಡೆಸದೆ ಇರುವುದು ತೀವ್ರ ಇರಿಸು-ಮುರಿಸಾಗುತ್ತದೆ.

ಅಲ್ಲದೆ, ಈ ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರೇ ಬಡಿದಾಡಿಕೊಂಡಿರುವುದು ಜಿಲ್ಲೆಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರಿಗೆ ಒಂದು ರೀತಿಯ ಗೊಂದಲ ಉಂಟಾಗಿದೆ.

ಈ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಂಡು ಪಕ್ಷವನ್ನು ಗೆಲ್ಲಿಸಿಕೊಂಡು ಬರುವ ಹೊಣೆಗಾರಿಕೆ ಹೊತ್ತು ಡಿ.ಕೆ.ಶಿವಕುಮಾರ್ ಅವರು ಪ್ರಯತ್ನ ಮುಂದುವರಿಸಿದ್ದಾರೆ.

ಈಗಾಗಲೇ ತುಕಾರಂ, ಪಿ.ಟಿ.ಪರಮೇಶ್ವರ್ ನಾಯಕ್ ಅವರಿಗೆ ಸಚಿವ ಸ್ಥಾನವನ್ನೇನೋ ನೀಡಿದ್ದಾರೆ. ಆದರೆ, ಇದು ಶಾಶ್ವತವಲ್ಲ ಎನ್ನುವುದನ್ನು ಪ್ರಚಾರ ಸಭೆಗಳಲ್ಲಿ ಬಹಿರಂಗವಾಗಿಯೇ ಹೇಳಿದ್ದಾರೆ.

ಈ ಮೂಲಕ ಈಗಾಗಲೇ ಸಚಿವ ಸ್ಥಾನ ಹೊಂದಿದವರು ತಮ್ಮ ಕ್ಷೇತ್ರದಲ್ಲಿ ಹೆಚ್ಚು ಲೀಡ್ ತರಬೇಕು. ಕಳೆದ ಉಪ ಚುನಾವಣೆಯಲ್ಲಿದ್ದ ಪರಿಸ್ಥಿತಿಯನ್ನೇ ಮುಂದುವರಿಸಿಕೊಂಡು ಹೋಗಬೇಕು. ಇನ್ನೇನು ಸಚಿವ ಸ್ಥಾನ ಸಿಕ್ಕಿದೆಯಲ್ಲ ಎಂದು ನಿರ್ಲಕ್ಷಿಸಿದರೆ ಸಚಿವ ಸ್ಥಾನಕ್ಕೆ ಖೋತಾ ಬೀಳುವ ಸಾಧ್ಯತೆಯಿದೆ ಎಂಬ ಡಿಕೆಶಿ ಎಚ್ಚರಿಕೆ ರವಾನಿಸಿದ್ದಾರೆ.

ಈ ಕುರಿತು ಹಡಗಲಿ ಪ್ರಚಾರ ಸಭೆಯಲ್ಲಿ ಸಚಿವ ಪಿ.ಟಿ.ಪರಮೇಶ್ವರ್ ಮುಂದೆಯೇ ಸೂಚ್ಯವಾಗಿ ಡಿಕೆಶಿ ಮಾತನಾಡಿ, ಪರಮೇಶ್ವರ್ ನಾಯಕ್ ಕ್ಷೇತ್ರದಾದ್ಯಂತ ಓಡಾಡಿ ಹೆಚ್ಚು ಲೀಡ್ ತರಬೇಕು ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದು ರೊಟೇಷನ್ ರೀತಿ ಕೊಡಲಾಗುವುದು ಎಂದು ಡಿಕೆಶಿ ಅವರು ಸಂಡೂರು ಸಭೆಯಲ್ಲಿನ ತಮ್ಮ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಸಚಿವಾಕಾಂಕ್ಷಿ ಕೈ ಶಾಸಕರಿಗೆ ಮತ್ತೊಂದು ಚಾನ್ಸ್ ದೊರೆತಂತಾಗಿದೆ. ಸಚಿವ ಸ್ಥಾನ ಸಿಗದಿದ್ದಕ್ಕೆ ಮುನಿಸಿಕೊಂಡಿದ್ದ ಬಳ್ಳಾರಿ ಗ್ರಾಮಾಂತರ ಶಾಸಕ ನಾಗೇಂದ್ರ, ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಅವರುಗಳು ಡಿಕೆಶಿ ನೀಡಿರುವ ಟಾಸ್ಕ್‍ಗೆ ಒಪ್ಪಿಗೆ ಸೂಚಿಸಿದಂತಿದೆ.

ನಾಮಪತ್ರ ಸಲ್ಲಿಸುವವರೆಗೆ ಅಂತರ ಕಾಯ್ದುಕೊಂಡಿದ್ದ ನಾಗೇಂದ್ರ ಹಾಗೂ ಮಾಜಿ ಶಾಸಕ ಸಿರಾಜ್ ಶೇಖ್ ವಿರುದ್ಧ ಹರಿಹಾಯ್ದು, ಪಕ್ಷದಿಂದ ವಜಾಗೊಳಿಸಬೇಕು.

ಅಲ್ಲಿಯವರೆಗೆ ಪ್ರಚಾರ ಮಾಡೋದಿಲ್ಲವೆಂದಿದ್ದ ಭೀಮಾನಾಯ್ಕ್ ಇದೀಗ ಆ್ಯಕ್ಟಿವ್ ಆಗಿ ಕೈ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ಸಭೆಗಳಲ್ಲಿ ಭಾಗವಹಿಸಿ ಪ್ರಚಾರ ಮಾಡುತ್ತಿದ್ದಾರೆ.

ಶಾಸಕ ಭೀಮಾನಾಯ್ಕ್ ಹಾಗೂ ನಾಗೇಂದ್ರ ಅವರನ್ನು ಡಿ.ಕೆ.ಶಿವಕುಮಾರ್ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ.

ರೆಸಾರ್ಟ್‍ನಲ್ಲಿನ ಬಡಿದಾಟ ಪ್ರಕರಣದ ಕೈ ಶಾಸಕರಾದ ಆನಂದ್‍ಸಿಂಗ್ ಸಹ ಹೊಸಪೇಟೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಆದರೆ ಶಾಸಕ ಗಣೇಶ್ ಕ್ಷೇತ್ರವಾದ ಕಂಪ್ಲಿಯಲ್ಲಿ ಬೆಂಬಲಿಗರ ಕೆಂಗಣ್ಣಿಗೆ ಡಿಕೆಶಿ ಗುರಿಯಾಗಿದ್ದಾರೆ. ಈ ಕ್ಷೇತ್ರ ಹೊರತುಪಡಿಸಿದಂತೆ ಉಳಿದ ಕ್ಷೇತ್ರಗಳಲ್ಲಿ ಕೈ ಶಾಸಕರ ಬಂಡಾಯ, ಅಸಮಾಧಾನಗಳಿಗೆ ಬ್ರೇಕ್ ಹಾಕಿ ಮಂತ್ರಿಗಿರಿ ಟಾಸ್ಕ್ ನೀಡಿ ಬಳ್ಳಾರಿಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲ್ಲಲು ರಣತಂತ್ರವನ್ನು ಡಿಕೆಶಿ ರೂಪಿಸಿದ್ದಾರೆ. ಆದರೆ, ಇದು ಎಷ್ಟರಮಟ್ಟಿಗೆ ಫಲಕಾರಿಯಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ