ಮೈಸೂರು, ಏ.11- ಮೋದಿ ಮತ್ತೆ ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ.
ನಗರದ ಖಾಸಗಿ ಹೊಟೇಲ್‍ನಲ್ಲಿ ಇಂದು ಬೆಳಗ್ಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿ ಪ್ರತಿಕಾಗೋಷ್ಠಿಯಲ್ಲಿ ರೇವಣ್ಣ ಮಾತನಾಡಿ, ಈ ಬಾರಿ ಮೋದಿ ಪ್ರಧಾನಿಯಾಗುವುದಿಲ್ಲ, ಒಂದು ವೇಳೆ ಅವರು ಪ್ರಧಾನಿಯಾದರೆ ನಾನು ರಾಜಕೀಯ ನಿವೃತ್ತಿ ಹೊಂದುವುದಾಗಿ ಹೇಳಿದರು.
ಈಗ ನಡೆಯುತ್ತಿರುವ ಚುನಾವಣೆಯಲ್ಲಿ ನಮಗೆ ಉತ್ತಮ ಫಲಿತಾಂಶ ದೊರೆಯಲಿದೆ. 2018 ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಭವಿಷ್ಯ ರೂಪಿತವಾಯಿತು.
ಅದೇ ರೀತಿ ರಾಜ್ಯದಲ್ಲಿ ಇದೆ 18ರಂದು ಲೋಕಸಭಾ ಚುನಾವಣೆ ನಡೆಯುತ್ತಿದೆ. ಸಂಖ್ಯಾಶಾಸ್ತ್ರದ ಪ್ರಕಾರ ನಮಗೆ ಆ ದಿನ ಅನುಕೂಲವಾಗಿದೆ ಹಾಗಾಗಿ ನಾವೇ ಹೆಚ್ಚಿನ ಸ್ಥಾನಗಳಿಸುತ್ತೆವೆ. ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಹಿಡಿಯುವುದಿಲ್ಲ ಎಂದು ಭವಿಷ್ಯ ನುಡಿದರು.
ಕೋಮುವಾದಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರಕ್ಕೆ ತರಬಾರದು ಎಂಬ ಹಿನ್ನೆಲೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಒಂದಾಗಿದ್ದೇವೆ ಎಂದು ಪುನರುಚ್ಚರಿಸಿದರು.
ಮೋದಿ ರಾಜ್ಯದಲ್ಲಿ ಚುನಾವಣಾ ಭಾಷಣ ಮಾಡುವಾಗ ರೈತರಿಗೆ 6ಸಾವಿರ ನೀಡುವ ಯೋಜನೆಗೆ ರಾಜ್ಯ ಸರ್ಕಾರ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿಲ್ಲ ಎಂದು ಹೇಳಿದ್ದಾರೆ.
ನಾವು ಪಟ್ಟಿಯನ್ನು ನೇರವಾಗಿ ಮೋದಿಯವರಿಗೆ ಕಳಿಸಬೇಕಾ ಎಂದು ಪ್ರಶ್ನಿಸಿದ ಅವರು, ಸಂಬಂಧಿತ ಇಲಾಖಾ ಅಧಿಕಾರಿಗಳ ಮತ್ತು ಕಾರ್ಯದರ್ಶಿಗಳ ಮುಖಾಂತರ 15 ಲಕ್ಷ ಮಂದಿ ಫಲಾನುಭವಿಗಳ ಪಟ್ಟಿಯನ್ನು ಕಳುಹಿಸಿದ್ದೇವೆ. ಮೋದಿಯವರು 15 ಮಂದಿ ರೈತರ ಪಟ್ಟಿಯೂ ಬಂದಿಲ್ಲ ಸಾಬೀತು ಮಾಡಿದರೆ. ತಾವು ರಾಜಕೀಯ ಬಿಟ್ಟು ಬಿಡುವುದಾಗಿ ಹೇಳಿದರು.
ದೇಶ ಮತ್ತು ರಾಜ್ಯದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಬೆಳವಣಿಗೆಗಳಿಂದ ಮೋದಿ ವಿಚಲಿತರಾಗಿದ್ದಾರೆ. ಇತ್ತೀಚಿನವರೆಗೂ ರಾಮಮಂದಿರ ನಿರ್ಮಾಣದ ಜಪ ಮಾಡುತ್ತಿದ್ದ ಅವರು, ಈಗ ಭಯದಿಂದ ದೇವೇಗೌಡರ ಜಪ ಮಾಡುತ್ತಿದ್ದಾರೆ ಎಂದು ನುಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಜಯಕುಮಾರ್, ನಗರಾಧ್ಯಕ್ಷ ಮೂರ್ತಿ, ಮಾಜಿ ಶಾಸಕ ವಾಸು ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.