ಕಾಂಗ್ರೇಸ್ ಸರ್ಕಾರ ಮಾಡಿರುವ ಸಾಧನೆಯನ್ನು ಯಾರು ಮಾಡಲು ಸಾಧ್ಯವಿಲ್ಲ-ಸಂಸದ ಆರ್.ಧ್ರುವನಾರಾಯಣ್

ಕೊಳ್ಳೇಗಾಲ, ಏ.11- ಶೋಷಿತರು, ಹಿಂದುಳಿದವರು, ಬಡವರ ಪರವಾದ ಏಕೈಕ ಪಕ್ಷ ಕಾಂಗ್ರೇಸ್. ರೈತರ ಸಾಲಮನ್ನಾ, ಆಹಾರ ಭದ್ರತಾ ಕಾಯ್ದೆ, ಉಚಿತ ಶಿಕ್ಷಣ ನೀಡುವ ಶಿಕ್ಷಣ ಕಾಯ್ದೆ ಸೇರಿದಂತೆ ಬಹುತೇಕ ಯೋಜನೆಗಳು ಕಾಂಗ್ರೆಸ್ ಸರ್ಕಾರದ ಕೊಡುಗೆಯೇ ಹೊರತು ನರೇಂದ್ರ ಮೋದಿಯದಲ್ಲ ಎಂದು ಸಂಸದ ಆರ್.ಧೃವನಾರಾಯಣ್ ಹೇಳಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅವರು, ತಾಲ್ಲೂಕಿನ ಟಗರಪುರ, ಕುಂತೂರು, ಕುಣಗಳ್ಳಿ, ಹರಳೆ, ಸಿದ್ದಯ್ಯನಪುರ, ತಿಮ್ಮರಾಜಿಪುರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸಿ ಮತ ಯಾಚನೆ ಮಾಡಿದರು.

ನಂತರ ಕುಂತೂರು ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಾಡಿರುವ ಸಾಧನೆಯನ್ನು ಯಾರು ಮಾಡಲು ಸಾಧ್ಯವಿಲ್ಲ. ನಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದೇವೆ ಮಾಡಿರುವ ಕೆಲಸಕ್ಕೆ ಕೂಲಿ ಕೇಳಲು ಬಂದಿದ್ದೇವೆ ಎಂದರು.

ನಮ್ಮೆಲ್ಲರ ಹಕ್ಕುಗಳನ್ನು ರಕ್ಷಣೆ ಮಾಡುವ ಸಂವಿಧಾನವನ್ನು ರಕ್ಷಣೆ ಮಾಡದಿದ್ದರೆ ಈ ದೇಶವನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ. ನನ್ನ, ಗುರಿ ಹಿಂದೆ ಶೈಕ್ಷಣಿಕ ಪ್ರಗತಿಯಿದೆ. ಕ್ಷೇತ್ರದಲ್ಲಿ ಅದನ್ನು ಸಾಧಿಸಿದ್ದೇನೆ. ಮುಂದೆ ಕೈಗಾರಿಕೆ ಶ್ರಮಿಸಿ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಹಾಗೂ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಬಿಜೆಪಿ, ಬಿಎಸ್‍ಪಿ ತೊರೆದು ಹಲವು ಮುಖಂಡರು ಆರ್.ಧೃವನಾರಾಯಣ್ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊಂಡರು. ಕೆಪಿಸಿಸಿ ವೀಕ್ಷಕರಾದ ವಾಸಂತಿ ಶಿವಣ್ಣ, ಮಾಜಿ ಶಾಸಕರಾದ ಎಸ್.ಜಯಣ್ಣ, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ