ಮಂಡ್ಯ,ಏ.11-ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಚುನಾವಣಾ ಕಾರ್ಯತಂತ್ರಗಳನ್ನು ಹೆಣೆಯಲು ಸರಣಿ ಸಭೆಗಳು ನಡೆದಿವೆ.
ಕೆಆರ್ಎಸ್ನ ಖಾಸಗಿ ಹೋಟೆಲ್ನಲ್ಲಿ ತಂಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಡರಾತ್ರಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿದ್ದರಾಮೇಗೌಡ ಸೇರಿದಂತೆ ಇನ್ನಿತರ ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ.
ಇಂದು ಬೆಳಗ್ಗೆಯೂ ಜಿಲ್ಲೆಯ ಶಾಸಕರಾದ ಪುಟ್ಟರಾಜು, ರವೀಂದ್ರ ಶ್ರೀಕಂಠಯ್ಯ, ನಾರಾಯಣಗೌಡ, ಅನ್ನದಾನಿ, ಎಂ.ಶ್ರೀನಿವಾಸ್ ಅವರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.
ಚುನಾವಣೆಗೆ ಕೇವಲ 7 ದಿನ ಬಾಕಿ ಇರುವ ಹಿನ್ನೆಲೆಯಲ್ಲಿ ಚುನಾವಣಾ ಕಾರ್ಯತಂತ್ರದ ಬಗ್ಗೆ ದೀರ್ಘ ಸಮಾಲೋಚನೆ ನಡೆಸಲಾಗುತ್ತಿದೆ.
15ಕ್ಕೆ ಜೆಡಿಎಸ್ ಸೇರ್ಪಡೆ:
ಈ ಭಾಗದ ರೈತ ಸಂಘದ ಪ್ರಭಾವಿ ಮುಖಂಡ ಎಂಡಿಸಿಸಿ ಬ್ಯಾಂಕ್ನ ಮಾಜಿ ನಿರ್ದೇಶಕ ಕೆನ್ನಾಳು ಚಂದ್ರಶೇಖರ್ ಇದೇ 15ಕ್ಕೆ ಜೆಡಿಎಸ್ಗೆ ಸೇರ್ಪಡೆಗೊಳ್ಳಲಿದ್ದಾರೆ.
ಜೆಡಿಎಸ್ಗೆ ಕ್ಷೇತ್ರದಲ್ಲಿ ರೈತ ಸಂಘದ ಬೆಂಬಲವೂ ದೊರೆತಂತಾಗಿದ್ದು ಜೆಡಿಎಸ್ ಕ್ಷೇತ್ರದಲ್ಲಿ ಪ್ರಾಬಲ್ಯ ಹೆಚ್ಚಿಸಿಕೊಳ್ಳಲಿದೆ.