ಕಲಬುರಗಿ, ಏ.10- ಕಲಬುರಗಿ ಕ್ಷೇತ್ರದ ವಿವಿಧೆಡೆ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ ಅವರು ಬಿಜೆಪಿ ಪರವಾಗಿ ಮತ ಯಾಚನೆ ಮಾಡಿದರು.
ಕಾಂಗ್ರೆಸ್ನ ಪ್ರಭಾವಿ ನಾಯಕ ಮಲ್ಲಿಕಾರ್ಜುನ ಖರ್ಗೆಯವರನ್ನು ಕಟ್ಟಿ ಹಾಕಲು ಬಿಜೆಪಿ ರಣತಂತ್ರ ರೂಪಿಸಿದ್ದು, ಸಮುದಾಯದ ಮುಖಂಡರೂ ಆಗಿರುವ ಹೈದರಾಬಾದ್-ಕರ್ನಾಟಕ ಭಾಗದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಹಾಗೂ ಈ ಭಾಗದಲ್ಲಿ ಅಧಿಕಾರಿಯಾಗಿ ಜನ ಮನ್ನಣೆ ಗಳಿಸಿದ್ದ ಕೆ.ರತ್ನಪ್ರಭಾ ಅವರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು.
ಇಂದು ರತ್ನಪ್ರಭಾ ಅವರು ಕಲಬುರಗಿಯ ಸೇಡಂ ಇನ್ನಿತರೆಡೆ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಪರವಾಗಿ ಪ್ರಚಾರ ನಡೆಸಿದರು. ಖರ್ಗೆಯವರ ಒಂದು ಕಾಲದ ಶಿಷ್ಯರಾದ ಬಾಬುರಾವ್ ಚಿಂಚನಸೂರ್, ಮಾಲೀಕಯ್ಯ ಗುತ್ತೇದಾರ್, ಎ.ಬಿ.ಮಾಲಕರೆಡ್ಡಿಯವರು ಈಗ ಬಿಜೆಪಿ ಸೇರಿ ಖರ್ಗೆ ವಿರುದ್ಧವಾಗಿ ಪ್ರಚಾರ ಮಾಡುತ್ತಿದ್ದಾರೆ. ಈಗ ರತ್ನಪ್ರಭಾ ಅವರು, ಬಿಜೆಪಿ ಪರ ಪ್ರಚಾರ ಕಣಕ್ಕೆ ಇಳಿದಿದ್ದಾರೆ.
ನಿನ್ನೆಯಷ್ಟೇ ಖರ್ಗೆ ಪರ ಪ್ರಚಾರಕ್ಕೆ ಆಗಮಿಸಿದ್ದ ಬಾಬುರಾವ್ ಚೌವ್ಹಾಣ್, ಸುಭಾಷ್ ರಾಠೋಡ್ಗೆ ಲಂಬಾಣಿ ಸಮುದಾಯದ ಜನ ತರಾಟೆಗೆ ತೆಗೆದುಕೊಂಡಿದ್ದರು. ನಮ್ಮ ಸಮುದಾಯದ ಮುಖಂಡರೊಬ್ಬರಿಗೆ ಮಾತ್ರವೇ ಲೋಕಸಭೆ ಸ್ಪರ್ಧೆಗೆ ಅವಕಾಶ ಸಿಕ್ಕಿದೆ.ಹೀಗಾಗಿ ಅವರ ವಿರುದ್ಧ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ಇಂದು ಮಾಜಿ ಸಚಿವ, ಜೆಡಿಎಸ್ ಮುಖಂಡ ರೇವೂ ನಾಯಕ್ ಬೆಳಮಗಿಯವರು ಖರ್ಗೆ ಪರ ಪ್ರಚಾರಕ್ಕ ಹೋದಾಗ ಬಂಜಾರ ಸಮುದಾಯದವರು ಇದೇ ರೀತಿ ಬಿಸಿ ಮುಟ್ಟಿಸಿದ್ದಾರೆ.