ಕೆಆರ್‍ಎಸ್ ಭಾಗದ ಯಾವುದೇ ಕುಟುಂಬವನ್ನು ಎತ್ತಂಗಡಿ ಮಾಡಲು ಬಿಡುವುದಿಲ್ಲ-ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ,ಏ.10-ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಹಾಗೂ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರವಾಗಿ ಕೆಆರ್‍ಎಸ್‍ನ ಹಳ್ಳಿಕಟ್ಟೆ ಸರ್ಕಲ್‍ನಿಂದ ಚುನಾವಣಾ ಪ್ರಚಾರದ ಅಂಗವಾಗಿ ರೋಡ್ ಶೋ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ತಾವು ಬದುಕಿರುವವರೆಗೂ ಕೆಆರ್‍ಎಸ್ ಭಾಗದ ಒಂದೂ ಕುಟುಂಬವನ್ನೂ ಎತ್ತಂಗಡಿ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆ.ಆರ್.ಎಸ್ ಬಳಿ ಡಿಸ್ನಿ ಲ್ಯಾಂಡ್ ಪ್ರಾರಂಭ ಮಾಡುತ್ತಿರುವುದು ಈ ಭಾಗದ ಯುವಕರಿಗೆ ಉದ್ಯೋಗ ನೀಡಲು ಹೊರತು ತಮ್ಮ ಸ್ವಾರ್ಥವೇನೂ ಇಲ್ಲ ಎಂದು ಹೇಳಿದರು.

ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಣ್ಣಪುಟ್ಟ ವ್ಯಾಪಾರಿಗಳಿಗೆ ಶಾಶ್ವತ ಪರಿಹಾರ ನೀಡಲು ಬದ್ದ.ಈ ಭಾಗದಲ್ಲಿ ಹಕ್ಕು ಪತ್ರಗಳನ್ನು ನೀಡಲು ಈಗಾಗಲೇ ಚುನಾವಣೆ ಮುಗಿದ ಬಳಿಕ ಹಕ್ಕುಪತ್ರಗಳು ದೊರೆಯಲಿವೆ ಎಂದು ಹೇಳಿದರು.

ಪ್ರಸಕ್ತ ಚುನಾವಣೆಯಲ್ಲಿ ಟೀಕೆ ಮಾಡಲು ಬಂದಿಲ್ಲ. ತಮ್ಮ ಹಾಗೂ ಈ ಭಾಗದ ಜನರ ಬಾಂಧವ್ಯವನ್ನು ಸ್ಮರಿಸಿಕೊಳ್ಳಲು ಬಯಸಿದ್ದೇನೆ ಎಂದರು.

ಲೋಕಸಭಾ ಚುನಾವಣೆಗೆ ನಿಖಿಲ್ ಹೆಸರು ಪ್ರಸ್ತಾಪ ಮಾಡಿದ್ದು ಶಾಸಕ ರವೀಂದ್ರ ಶ್ರೀಕಂಠಯ್ಯನವರು. ಜನರ ಕೆಲಸದ ವಿಷಯದಲ್ಲಿ ಶ್ರೀಕಂಠಯ್ಯನವರು ಅಚ್ಚುಕಟ್ಟಾಗಿ ಮಾಡುತ್ತಾರೆ ಎಂದು ಹೇಳಿದರು.

ಬಿಜೆಪಿಯವರು ವಿಧಾನಸಭೆಯಲ್ಲಿ ಮಂಡ್ಯ ಜಿಲ್ಲೆಯ ಮುಖ್ಯಮಂತ್ರಿ ಎಂದು ಟೀಕೆ ಮಾಡುತ್ತಾರೆ.ಆದರೆ ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡುತ್ತಾರೆ.

ಅಂಥವರಿಗೆ ಮತ ನೀಡುತ್ತೀರೋ ಅಥವಾ ನಿಮ್ಮ ಸೇವೆ ಮಾಡುವ ನಮಗೆ ಮತ ನೀಡುತ್ತೀರೋ ಎಂದು ಯೋಚಿಸಿ ಎಂದು ಜನರಲ್ಲಿ ಮನವಿ ಮಾಡಿದರು.

ಚುನಾವಣಾ ಪ್ರಚಾರ ಕೈಗೊಳ್ಳುವ ಮುನ್ನ ಅರಳೀಕಟ್ಟೆ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು ಜೊತೆಗೆ ಹಸುಕರುವಿಗೂ ಪೂಜೆ ಸಲ್ಲಿಸಿದರು.

ಚುನಾವಣಾ ಪ್ರಚಾರದ ನಡುವೆ ತಮ್ಮ ಪುತ್ರ ನಿಖಿಲ್‍ನಂತೆ ಸ್ಟ್ರಾ ಇಲ್ಲದೆ ಎಳನೀರು ಕುಡಿದು ನೆರೆದಿದ್ದವರ ಗಮನ ಸೆಳೆದರು.

ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು, ಶಾಸಕ ರವೀಂದ್ರ ಶ್ರೀಕಂಠಯ್ಯ ಸೇರಿದಂತೆ ಸ್ಥಳೀಯ ಮುಖಂಡರು ಕುಮಾರಸ್ವಾಮಿ ಅವರ ರೋಡ್‍ಶೋಗೆ ಸಾಥ್ ನೀಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ