ಬೆಂಗಳೂರು, ಏ.9-ಪ್ರೆಸ್ಕ್ಲಬ್ ಮತ್ತು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ರಾಷ್ಟ್ರರಾಜಕಾರಣದ ಹಿತದೃಷ್ಟಿಯಿಂದ ಮೋದಿಯವರ ಸರ್ವಾಧಿಕಾರಿ ಆಡಳಿತವನ್ನು ಕಿತ್ತೊಗೆಯಲು ಲೋಕಸಭೆ ಚುನಾವಣೆಯಲ್ಲಿ ಮೈತ್ರಿಮಾಡಿಕೊಂಡಿದ್ದೇವೆ. ಸಂಸತ್ ಚುನಾವಣೆ ನಂತರ ಚುನಾವಣಾ ಪೂರ್ವ ಮೈತ್ರಿ ಇರುವುದಿಲ್ಲ. ಈ ಹಿಂದೆ ಬಿಬಿಎಂಪಿ ಚುನಾವಣೆಯನ್ನು ನಾವು ಪ್ರತ್ಯೇಕವಾಗಿಯೇ ಎದುರಿಸಿದ್ದೇವೆ. ಸ್ಥಳೀಯ ಸಂಸ್ಥೆಯ ಚುನಾವಣೆಯನ್ನು ಅದೇ ರೀತಿ ಎದುರಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ನಿಂದ ರಾಹುಲ್ಗಾಂಧಿ ಪ್ರಧಾನಿಯಾಗಬೇಕೆಂಬುದು ನಮ್ಮ ಅಭಿಪ್ರಾಯ. ಚುನಾವಣೆ ನಡೆದು ಮಹಾಘಟಬಂಧನ್ ಅಧಿಕಾರಕ್ಕೆ ಬಂದಾಗ ರಾಹುಲ್ಗಾಂಧಿ ಪ್ರಧಾನಿಯಾಗುತ್ತಾರೆ ಎಂದ ಅವರು, ಬಿಜೆಪಿಯಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವ ವಿಶ್ವಾಸವಿಲ್ಲ. ಬಿಜೆಪಿ ಒಳವಲಯದಲ್ಲೇ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಹೆಸರು ಕೇಳಿಬರುತ್ತಿದೆ. ಮೋದಿಯವರ ಸರ್ವಾಧಿಕಾರಿ ಧೋರಣೆ ಬಿಜೆಪಿಯವರಲ್ಲೇ ಅಸಹನೆ ಸೃಷ್ಟಿಸಿದೆ ಎಂದು ಹೇಳಿದರು.
ನಾನು ಕೆಪಿಸಿಸಿ ಅಧ್ಯಕ್ಷನಾದ ನಂತರ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಎಲ್ಲಾ ಉಪಚುನಾವಣೆಯಲ್ಲೂ ಉತ್ತಮ ಫಲಿತಾಂಶ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ, ಮಾಜಿ ಮುಖ್ಯಮಂತ್ರಿಗಳು, ಪ್ರಭಾವಿನಾಯಕರುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಮುಂದುವರೆಸಬೇಕಾದ ಪರಿಸ್ಥಿತಿ ಇದೆ. ಈ ಕೆಲಸವನ್ನು ಸಮರ್ಥವಾಗಿ ಮಾಡುವ ಸಾಮಥ್ರ್ಯ ನನಗಿದೆ.ಆದರೆ ನಾವು ಎಷ್ಟರಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂಬುದು ಚುನಾವಣಾ ಫಲಿತಾಂಶದ ನಂತರ ಗೊತ್ತಾಗಲಿದೆ ಎಂದರು.
ಕೆಪಿಸಿಸಿ ಅಧ್ಯಕ್ಷನಾಗಿ ಎಲ್ಲ ತೀರ್ಮಾನಗಳಲ್ಲೂ ನಾನು ಭಾಗಿಯಾಗಿದ್ದೇನೆ. ನಾನು ಪಕ್ಷ ನಿಷ್ಠನೇ ಹೊರತು ವ್ಯಕ್ತಿನಿಷ್ಠನಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಮತ್ತೊಮ್ಮೆ ಕಾಂಗ್ರೆಸ್ ಎಂಬ ಘೋಷಣೆಯನ್ನು ಚುನಾವಣೆ ಎದುರಿಸಿದ್ದೆವು. ಮತ್ತೊಮ್ಮೆ ಸಿದ್ದರಾಮಯ್ಯ ಎಂಬ ಘೋಷಣೆಯಾಗಿರಲಿಲ್ಲ. ಜನರು ಆ ರೀತಿ ಅರ್ಥೈಸಿಕೊಂಡಿರಬಹುದು.ಅದಕ್ಕೆ ನಾವು ಹೊಣೆಯಲ್ಲ ಎಂದರು.
ಜೆಡಿಎಸ್ ಜೊತೆಗಿನ ಚುನಾವಣಾ ಪೂರ್ವ ಮೈತ್ರಿಯಿಂದ ಪರಸ್ಪರ ಮತಗಳಿಕೆ ಪ್ರಮಾಣ ಹೆಚ್ಚಾಗಲಿದೆ. ಹಳೇ ಮೈಸೂರು ಭಾಗದಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ ಎಂದು ಹೇಳಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಯನ್ನು ಭಾರೀ ಅಂತರದಿಂದ ಗೆಲ್ಲಿಸಿಕೊಳ್ಳುತ್ತೇವೆ. ಅದಕ್ಕೆ ಬೇಕಾದ ರಣತಂತ್ರದ ಬಗ್ಗೆ ನಾವೆಲ್ಲ ಚರ್ಚೆ ನಡೆಸಿದ್ದೇವೆ. ಕೆಲವು ಕಾಂಗ್ರೆಸ್ ನಾಯಕರು ಮೈತ್ರಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದರೆ ಅದರ ಫಲವನ್ನು ಮುಂದಿನ ದಿನಗಳಲ್ಲಿ ಅನುಭವಿಸಬೇಕಾಗುತ್ತದೆ.ಸಾವಿರ ಕಾರ್ಯಕರ್ತರುಗಳ ಪ್ರಮಾಣದಲ್ಲಿ ಒಂದಿಬ್ಬರು ಮೈತ್ರಿ ಅಭ್ಯರ್ಥಿ ವಿರುದ್ಧವಾಗಿ ಕೆಲಸ ಮಾಡುತ್ತಿರಬಹುದು.
ಆದರೆ ನಾವು ನಿಖಿಲ್ ಕುಮಾರಸ್ವಾಮಿಯನ್ನು ಗೆಲ್ಲಿಸಿಕೊಳ್ಳುತ್ತೇವೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಮ್ಮ ರಣತಂತ್ರದ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಇಂದು ಬೆಳಗ್ಗೆ ಕೂಡ ಮಂಡ್ಯ ಚುನಾವಣೆ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಹೇಳಿದರು.
ಮೈತ್ರಿಯಲ್ಲಿ ಯಾವುದೇ ಕೊರತೆಯಿಲ್ಲ. ಎಲ್ಲ ಕಡೆ ಉತ್ತಮವಾದ ಪ್ರತಿಕ್ರಿಯೆ ಇದೆ. ಮಂಡ್ಯದಲ್ಲಿ ವ್ಯತ್ಯಾಸಗಳಿವೆ. ಹಾಸನದಲ್ಲಿ ಜಿದ್ದಾಜಿದ್ದಿ ಇದೆ. ಏನೇ ಆದರೂ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಬಿಜೆಪಿಗೆ ಒಂದಂಕಿಗೆ ಕುಸಿಯುವಂತೆ ಮಾಡುತ್ತೇವೆ ಎಂದರು.