ಬೆಂಗಳೂರು,ಏ.9- ರಾಜ್ಯದೆಲ್ಲೆಡೆ ಚುನಾವಣಾ ಕಾವು ಜೋರಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ಸ್ಟಾರ್ ಪ್ರಚಾರಕರು ರಾಜ್ಯಕ್ಕೆ ದಾಂಗುಡಿ ಇಡುತ್ತಿದ್ದಾರೆ.ಎರಡು ಹಂತದಲ್ಲಿ ನಡೆಯಲಿರುವ ಲೋಕಸಭಾ ಚುನಾವಣಾ ಪ್ರಚಾರ ಕಣದಲ್ಲಿ ಭಾಗವಹಿಸಲು ಕಾಂಗ್ರೆಸ್-ಬಿಜೆಪಿ ವರಿಷ್ಠರು ರಾಜ್ಯಕ್ಕೆ ಎಡ ತಾಕುತ್ತಿದ್ದಾರೆ.
ನಿನ್ನೆ ಕೇಂದ್ರ ಸಚಿವ ಹರ್ಷವರ್ಧನ್ ರಾಜ್ಯಕ್ಕೆ ಭೇಟಿ ನೀಡಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ.ಇಂದು ಚಿತ್ರದುರ್ಗ, ಮೈಸೂರು ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರೀ ಬಹಿರಂಗ ಸಭೆ ನಡೆಸುವ ಮೂಲಕ ಈ ಭಾಗದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಚುನಾವಣಾ ಪ್ರಚಾರಕ್ಕೆ ಆಗಮಿಸಲಿದ್ದಾರೆ. ಅದೇ ರೀತಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಕೂಡ ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ರಾಜ್ಯಕ್ಕೆ ಬರಲಿದ್ದಾರೆ.ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್, ಯೋಗಿ ಆದಿತ್ಯನಾಥ್, ಅರುಣ್ ಜೇಟ್ಲಿ ಸೇರಿದಂತೆ ಹಲವು ನಾಯಕರ ಪ್ರಚಾರ ಕಾರ್ಯಕ್ರಮಗಳು ಈಗಾಗಲೇ ನಿಗದಿಯಾಗಿದ್ದು, ಸದ್ಯದಲ್ಲೇ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಲಿದ್ದಾರೆ.
ಅದೇ ರೀತಿ ರಾಹುಲ್ ಗಾಂಧಿ, ರಾಜ್ಯಕ್ಕೆ ಬಂದ ಪ್ರಚಾರ ನಡೆಸುವುದರ ಜೊತೆ ಪ್ರಚಾರ ನಡೆಸಲಿದ್ದಾರೆ.
ಪ್ರಿಯಾಂಕ ಗಾಂಧಿ ಕೂಡ ಆಗಮಿಸುವ ನಿರೀಕ್ಷೆಯಿದೆ.ಇದರ ಜೊತೆ ಚಲನಚಿತ್ರ ನಟರು, ಮುಖಂಡರು, ಖ್ಯಾತ ನಾಮರು ಆಗಮಿಸಲಿದ್ದಾರೆ.
ಚಿತ್ರದುರ್ಗ, ತುಮಕೂರು, ದಾವಣಗೆರೆ, ಮೈಸೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ವಿವಿಧ ಕ್ಷೇತ್ರಗಳ ಅಭ್ಯರ್ಥಿಗಳು ಮೋದಿಯವರ ಸಮಾವೇಶದಲ್ಲಿ ಪಾಲ್ಗೊಂಡು ಮಿಂಚಿದರು. ಮಂಡ್ಯ, ತುಮಕೂರು, ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಈ ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರಗಳಾಗಿ ಪರಿಣಮಿಸಿದೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಪರಮೇಶ್ವರ್, ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಸಚಿವರಾದ ಜಮೀರ್, ಪುಟ್ಟರಂಗಶೆಟ್ಟಿ, ಜಿ.ಟಿ.ದೇವೇಗೌಡ, ಸಿ.ಎಸ್.ಪುಟ್ಟರಾಜು, ಸಾ.ರಾ.ಮಹೇಶ್, ಡಿ.ಸಿ.ತಮ್ಮಣ್ಣ, ಎಚ್.ಡಿ.ರೇವಣ್ಣ ಸೇರಿದಂತೆ ಅನೇಕ ಘಟಾನುಘಟಿಗಳು ಬಿಡುವಿಲ್ಲದ ಪ್ರಚಾರ ನಡೆಸುತ್ತಿದ್ದಾರೆ.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿರುವ ಸುಮಲತಾ ಪರವಾಗಿ ಚಿತ್ರನಟರಾದ ಯಶ್, ದರ್ಶನ್, ದೊಡ್ಡಣ್ಣ, ನಿರ್ಮಾಪಕರಾದ ರಾಕ್ಲೈನ್ ವೆಂಕಟೇಶ್ ಪ್ರಚಾರ ನಡೆಸುತ್ತಿದ್ದಾರೆ. ಅತ್ತ ಕಲಬುರಗಿ ಚುನಾವಣಾ ಕಣ ಕೂಡ ಕಾವೇರಿದ್ದು ಕಾಂಗ್ರೆಸ್, ಬಿಜೆಪಿ ಎರಡೂ ಪಕ್ಷಗಳು ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ.
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಸಚಿವ ಪ್ರಿಯಾಂಕ ಖರ್ಗೆ, ಗೃಹ ಸಚಿವ ಎಂ.ಬಿ.ಪಾಟೀಲ, ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ, ಬಿ.ಆರ್. ಪಾಟೀಲ ಮುಂತಾದವರು ಪ್ರಚಾರ ನಡೆಸುತ್ತಿದ್ದರೆ ಇತ್ತ ಇವರ ಪ್ರತಿಸ್ಪರ್ಧಿ ಉಮೇಶ್ ಜಾಧವ್ ಪರವಾಗಿ ಮಾಜಿ ಸಚಿವರು, ಬಿಜೆಪಿ ಮುಖಂಡರು ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.