ಐಟಿ ಇಲಾಖೆ ಅಧಿಕಾರಿಗಳ ವಿರುದ್ಧ ರಾಜ್ಯ ಸರ್ಕಾರದ ಪ್ರತಿಭಟನೆ-ರಾಜ್ಯಪಾಲರಿಗೆ ದೂರು ನೀಡಿದ ಬಿಜೆಪಿ

ಬೆಂಗಳೂರು,ಏ.9-ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿ ಕಾನೂನು ಉಲ್ಲಂಘನೆ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪ್ರತಿಪಕ್ಷ ಬಿಜೆಪಿ ರಾಜ್ಯಪಾಲರಿಗೆ ದೂರು ನೀಡಿದೆ.

ಈ ಸಂಬಂಧ ಇಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಶಾಸಕ ಡಾ.ಅಶ್ವಥ್‍ನಾರಾಯಣ, ಪಕ್ಷದ ಸಹವಕ್ತಾರ ಎ.ಎಚ್.ಆನಂದ್, ರಾಘವೇಂದ್ರ ಸೇರಿದಂತೆ ಮತ್ತಿತರ ಮುಖಂಡರು ರಾಜ್ಯಪಾಲ ವಿ.ಆರ್.ವಾಲಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು.

ಮೂರು ಪುಟಗಳ ಎರಡು ಪ್ರತ್ಯೇಕ ಲಿಖಿತ ದೂರು ಸಲ್ಲಿಸಿರುವ ಬಿಜೆಪಿ ಐಟಿ ಒಂದು ಸ್ವಾಯತ್ತ ಸಂಸ್ಥೆ.ತಮಗಿರುವ ಖಚಿತ ಮಾಹಿತಿ ಆಧರಿಸಿ ದೇಶದ ಯಾವುದೇ ಭಾಗದಲ್ಲೂ ದಾಳಿ ನಡೆಸುವ ಸ್ವಾತಂತ್ರ್ಯ ಅವರಿಗಿದೆ. ಒಂದು ವೇಳೆ ಕಾನೂನು ಬಾಹಿರವಾಗಿ ದಾಳಿ ನಡೆಸಿದರೆ ಯಾರೇ ಆಗಲಿ ನ್ಯಾಯಾಂಗದಲ್ಲಿ ಪ್ರಶ್ನಿಸಬಹುದು. ದಾಳಿ ನಡೆಸಿದ್ದೇ ತಪ್ಪು ಎಂದು ಐಟಿ ಕಚೇರಿ ಮುಂದೆ ಪ್ರತಿಭಟನೆ ಮಾಡುವುದು ಹಾಗೂ ತನಿಖಾಧಿಕಾರಿಗಳ ವಿರುದ್ದ ಆರೋಪ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದೆ.

ದೂರು ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್, ಚುನಾವಣಾ ಸಂದರ್ಭದಲ್ಲಿ ಅಕ್ರಮಗಳನ್ನು ತಡೆಗಟ್ಟಲು ಐಟಿ ಇಲಾಖೆಯು ರಾಜಕಾರಣಿಗಳು, ಸಂಬಂಧಿಕರು, ಆಪ್ತರು ಸೇರಿದಂತೆ ಮತ್ತಿತರರ ಮೇಲೆ ದಾಳಿ ನಡೆಸುವುದು ಸರ್ವೆ ಸಾಮಾನ್ಯ.

ಈ ಹಿಂದೆ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆದಿದೆ.ಅಂದು ವಿರೋಧವಿಲ್ಲದ್ದು ಈಗ ಪ್ರತಿಪಕ್ಷಗಳು ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿವೆ ಎಂದು ಪ್ರಶ್ನಿಸಿದರು.

ಐಟಿ ವಿಭಾಗದಲ್ಲಿ ಗುಪ್ತಚರ ಇರುತ್ತದೆ. ಹಲವು ದಿನಗಳಿಂದ ಈ ವಿಭಾಗ ತನ್ನದೇ ಮೂಲದಿಂದ ಮಾಹಿತಿ ಸಂಗ್ರಹಿಸಿ ಖಚಿತ ಸುಳಿವಿನ ಮೇರೆಗೆ ದಾಳಿ ಮಾಡುತ್ತದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಅನೇಕ ದಾಳಿಗಳು ನಡೆದಿತ್ತು. ಐಟಿ ಅಧಿಕಾರಿಗಳು ಬಿಜೆಪಿಯವರ ಮೇಲೂ ದಾಳಿ ನಡೆಸಿದ್ದಾರೆ. ಸ್ವತಂತ್ರವಾದ ಸ್ವಾಯತ್ತ ಸಂಸ್ಥೆಗಳನ್ನು ರಾಜಕೀಯಕ್ಕೆ ತಳಕು ಹಾಕುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ದಾಳಿ ಸಂದರ್ಭದಲ್ಲಿ ತನಿಖಾಧಿಕಾರಿಗಳು ಕೆಲವು ಮಹತ್ವದ ದಾಖಲೆಗಳು, ನಗದು ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ರತಿಪಕ್ಷಗಳು ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳಲು ಕೇಂದ್ರದ ವಿರುದ್ದ ಸುಳ್ಳು ಆರೋಪ ಮಾಡುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಇದೇ ವೇಳೆ ಬಿಜೆಪಿ ನಿಯೋಗ ಪುಲ್ವಾಮ ದಾಳಿ ಕುರಿತಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ವಿರುದ್ಧವೂ ದೂರು ಕೊಟ್ಟಿದೆ.

ನನಗೆ ಎರಡು ವರ್ಷಗಳ ಹಿಂದೆಯೇ ದಾಳಿ ನಡೆಯುತ್ತದೆ ಎಂದು ನಿವೃತ್ತ ಸೇನಾಧಿಕಾರಿಯೊಬ್ಬರು ಹೇಳಿದ್ದರು ಎನ್ನುವ ಮೂಲಕ ಕುಮಾರಸ್ವಾಮಿ ಅವರು ದೇಶದ ಭದ್ರತೆಯಲ್ಲೂ ನಿರ್ಲಕ್ಷ್ಯ ವಹಿಸಿದ್ದಾರೆ.ಒಂದು ವೇಳೆ ಅವರಿಗೆ ಖಚಿತ ಮಾಹಿತಿ ಇದ್ದರೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಬಹುದಿತ್ತಲ್ಲವೇ ಎಂದು ರಾಜೀವ್ ಚಂದ್ರಶೇಖರ್ ಪ್ರಶ್ನಿಸಿದರು.

ಭಯೋತ್ಪಾದಕರು ದಾಳಿ ನಡೆಸುವ ಬಗ್ಗೆ ನಿರ್ಧಿಷ್ಟ ಮಾಹಿತಿ ಇದ್ದರೆ ಪ್ರಧಾನಿಗೆ ಇಲ್ಲವೇ ರಕ್ಷಣಾ ಇಲಾಖೆಗೆ ಮಾಹಿತಿ ನೀಡಿದ್ದರೆ ದಾಳಿ ತಡೆಗಟ್ಟಬಹುದಿತ್ತು. ಕೇವಲ ರಾಜಕೀಯ ಲಾಭಕ್ಕೋಸ್ಕರ ಮುಚ್ಚಿಟ್ಟಿದ್ದರೇ ಎಂದು ತರಾಟೆಗೆ ತೆಗೆದುಕೊಂಡರು.

ಹೀಗಾಗಿಯೇ ಕುಮಾರಸ್ವಾಮಿ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಿದ್ದೇವೆ. ರಾಜ್ಯಪಾಲರು ಪರಿಶೀಲಿಸಿ ಕಾನೂನು ತಜ್ಞರ ಜೊತೆ ಚರ್ಚಿಸಿದ ಬಳಿಕ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ