ಕೆಲಸ ಮಾಡದ ಖೂಬಾಗೆ ಓಟು ಕೊಡಬೇಡಿ ಸಂಸದ ಖೂಬಾ ಸಾಧನೆ ಶೂನ್ಯ: ಖಂಡ್ರೆ ಟೀಕೆ

ಬೀದರ್: ಐದು ವರ್ಷಗಳಲ್ಲೂ ಒಂದೂ ಕೆಲಸ ಮಾಡದ ಬಿಜೆಪಿ ಅಭ್ಯರ್ಥಿಗೆ ಯಾಕೆ ಮತ ಕೊಡಬೇಕು ಎಂದು ಬೀದರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಪ್ರಶ್ನಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಸೋಮವಾರ ನಡೆದ ಜಿಲ್ಲಾ, ಬ್ಲಾಕ್ ಕಾಂಗ್ರೆಸ್ ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸುಳ್ಳು ಹೇಳುವುದೇ ಬಿಜೆಪಿಯವರ ಕಾಯಕವಾಗಿದೆ. ಸುಳ್ಳನ್ನು ಸತ್ಯವೆಂದು ಬಿಂಬಿಸುವ ಯತ್ನ ನಡೆಯುತ್ತಿದೆ. ಬೀದರ್ ಲೋಕಸಭಾ ಕ್ಷೇತ್ರದ ಮತದಾರರು ಸುಳ್ಳು ಹೇಳುವ, ಮೋಸ ಮಾಡುವ, ಜಾತಿ ಹೆಸರಿನಲ್ಲಿ ಜಗಳ ಹಚ್ಚುವ ಬಿಜೆಪಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ನಾಗರಿಕ ವಿಮಾನಯಾನ ಆರಂಭಕ್ಕೆ ಸಂಬಂದಿಸಿದಂತೆ ನಾನು ಸಚಿವನಾಗಿದ್ದಾಗ ಮೂರು ಸಭೆಗಳನ್ನು ನಡೆಸಿದ್ದೆ. ಸಂಸದ ಖೂಬಾ ಅವರನ್ನೂ ಕರೆದಿದ್ದೆ. ಮೂಲ ಸೌಲಭ್ಯ ಒದಗಿಸಲು ಅಗತ್ಯ ಕ್ರಮಕೈಗೊಂಡಿದ್ದೆ. ಆದರೆ, ಕೊನೆಯವರೆಗೂ ಸಂಸದ ಭಗವಂತ ಖೂಬಾ ಈ ವಿಷಯದಲ್ಲಿ ಆಸಕ್ತಿ ತೋರಲೇ ಇಲ್ಲ ಎಂದು ಈಶ್ವರ ಖಂಡ್ರೆ ಅಸಮಾಧಾನ ವ್ಯಕ್ತಪಡಿಸಿದರು.

ಎಫ್‍ಎಂ ಕೇಂದ್ರ ಆರಂಭಿಸುವುದಾಗಿ ಖೂಬಾ ಹೇಳುತ್ತಲೇ ಇದ್ದಾರೆ. ಆದರೆ, ಅವಧಿ ಮುಗಿದರೂ ಈ ಕಾರ್ಯ ಪೂರ್ಣಗೊಂಡಿಲ್ಲ ಎಂದು ಟೀಕಿಸಿದರು.

ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಹೆಸರು ಹೇಳಿಕೊಂಡು ಖೂಬಾ ಪ್ರಚಾರ ಪಡೆಯುತ್ತಿದ್ದಾರೆ. ಆದರೆ, ವಾಸ್ತವಿಕವಾಗಿ ಈ ಯೋಜನೆಯಲ್ಲಿ ಜಿಲ್ಲೆಯ ರೈತರಿಗೆ ದೊಡ್ಡ ಪ್ರಮಾಣದಲ್ಲಿ ಅನ್ಯಾಯವಾಗಿದೆ. ಆದರೆ, ಖುಬಾ ವಸ್ತುಸ್ಥಿತಿಯನ್ನು ಮರೆಮಾಚಿ, ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ.

ಫಸಲ್ ಬಿಮಾ ಪರಿಹಾರ ಕೊಡಿಸಿದ್ದಾಗಿ ಹೇಳಿಕೊಂಡು ಪ್ರಚಾರ ಪಡೆಯುತ್ತಿದ್ದಾರೆ ಎಂದು ಈಶ್ವರ ಖಂಡ್ರೆ ಆರೋಪಿಸಿದರು.

2017-18 ನೇ ಸಾಲಿನಲ್ಲಿ 1.77 ಲಕ್ಷ ರೈತರು 14.60 ಕೋಟಿ ರೂ. ವಿಮಾ ಕಂತು ಪಾವತಿ ಮಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ತಲಾ 85 ಕೋಟಿ ರೂ. ಕಂತು ಪಾವತಿ ಮಾಡಿದ್ದವು. ಬೀದರ್ ಜಿಲ್ಲೆಯೊಂದರಲ್ಲಿಯೇ ಒಟ್ಟು 186 ಕೋಟಿ ರೂ. ವಿಮಾ ಕಂತು ಪಾವತಿಸಲಾಗಿತ್ತು. ಆದರೆ, ವಿಮಾ ಕಂಪೆನಿಯು 2154 ರೈತರಿಗೆ ಬರೀ 91 ಲಕ್ಷ ರೂ. ವಿಮೆ ಪರಿಹಾರ ನೀಡಿದೆ. ವಿಮೆ ಯೋಜನೆ ಅನುಷ್ಠಾನಗೊಳಿಸಿದ ಕಂಪೆನಿಗೆ ನಾಲ್ಕೇ ತಿಂಗಳಲ್ಲಿ ಬರೀ ಬೀದರ್ ಜಿಲ್ಲೆಯೊಂದರಿಂದಲೇ 185 ಕೋಟಿ ರೂ. ಲಾಭ ಆಗಿದೆ. ವಸ್ತುಸ್ಥಿತಿ ಹೀಗಿದ್ದರೂ ಬಿಜೆಪಿ ಅಭ್ಯರ್ಥಿಯು ವಿಮೆ ಪರಿಹಾರ ಕೊಡಿಸಿದ್ದಾಗಿ ಜಂಬ ಕೊಚ್ಚಿಕೊಳ್ಳುತ್ತಿದ್ದಾರೆ. ಮತದಾರರು, ರೈತರು ಬಿಜೆಪಿಯ ಈ ಮೋಸಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ಜಿಲ್ಲೆಗೆ ಹತ್ತಾರು ಕೊಡುಗೆ ನೀಡಲಾಗಿದೆ. ನಗರ ಸ್ಥಳಿಯ ಸಂಸ್ಥೆಗಳಿಗೆ ನೂರಾರು ಕೋಟಿ ರೂ. ಅನುದಾನ ನೀಡಲಾಗಿದೆ. ಕಾರಂಜಾ ಕಾಲುವೆ ಆಧುನೀಕರಣ, ಕೆರೆಗಳ ಸುಧಾರಣೆ, ಕೆರೆ ಭರ್ತಿ ಸೇರಿದಂತೆ ನೀರಾವರಿ ಯೋಜನೆಗೆ ಸಾವಿರ ಕೋಟಿ ರೂ. ಮಂಜೂರು ಮಾಡಿಸಲಾಗಿದೆ. ನೀರಾವರಿ ಹೆಚ್ಚಳಕ್ಕೆ ನೆರವಾಗುವ ಕಾರಂಜಾ ಕಾಲುವೆ ಸುಧಾರಣೆ ಕಾರ್ಯ ನಡೆಯುತ್ತಿದೆ ಎಂದು ಖಂಡ್ರೆಯವರು ಹೇಳಿದರು.

ಹೈದ್ರಾಬಾದ್ ಕರ್ನಾಟಕದ ಅಭಿವೃಧ್ಧಿಕೆ ಕಾಂಗ್ರೆಸ್ ಮಹತ್ತರ ಕೊಡುಗೆ ನೀಡಿದೆ. ಸಂವಿಧಾನದ 371 ನೇ ಕಲಂ ತಿದ್ದುಪಡಿ ಈ ಭಾಗಕ್ಕೆ ಕಾಮಧೇನು ಆಗಿದೆ. ಹೈ.ಕ. ಅಭಿವೃಧ್ಧಿ ಮಂಡಳಿಗೆ ಸಾವಿರಾರು ಕೋಟಿ ರೂ.ಅನುದಾನ ನೀಡಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.

ಹೈ.ಕ. ಭಾಗದ ಎಲ್ಲ ಐದೂ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‍ಅನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಕೆಲಸ ಮಾಡಿದವರಿಗೆ ಪ್ರಾಶಸ್ತ್ಯ ನೀಡಬೇಕು ಎಂದು ಒತ್ತಿ ಹೇಳಿದರು.

ಎಐಸಿಸಿ ಕಾರ್ಯದರ್ಶಿ ಯಶೋಮತಿ ಠಾಕೂರ್ ಮಾತನಾಡಿ, ಬಿಜೆಪಿಯವರಿಗೆ ಮಾತೇ ಬಂಡವಾಳವಾಗಿದೆ ಎಂದು ದೂರಿದರು. ಕೆಲಸ ಮಾಡುವುದು ಕಮ್ಮಿ. ಮಾತನಾಡುವುದು ಹೆಚ್ಚು. ಮಾಡದೇ ಇರುವ ಕೆಲಸದ ಬಗ್ಗೆಯೂ ಮಾತನಾಡುವ ಕೆಟ್ಟ ಚಾಳಿ ಬಿಜೆಪಿಗಿದೆ ಎಂದು ದೂರಿದರು.

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದೆ. ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿರುವ ಈಶ್ವರ ಖಂಡ್ರೆ ಅವರ ಗೆಲುವು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪಕ್ಷದ ಕಾರ್ಯಕರ್ತರು, ಮುಖಂಡರು ಪ್ರಾಮಾಣಿಕವಾಗಿ ಶ್ರಮಿಸಬೇಕು. ದಾಖಲೆ ಅಂತರದಿಂದ ಈಶ್ವರ ಖಂಡ್ರೆ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದರು.

ಸಚಿವ ರಾಜಶೇಖರ ಪಾಟೀಲ್ ಹುಮನಾಬಾದ್ ಮಾತನಾಡಿ, ಪ್ರತಿಷ್ಠೆ, ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಶ್ರೇಯೋಭಿವೃದ್ಧಿಗಾಗಿ ದುಡಿಯಬೇಕು ಎಂದು ಸಲಹೆ ನೀಡಿದರು.

2014 ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಹತ್ತಾರು ಭರವಸೆ ನೀಡಿದ್ದರು. ಎಲ್ಲವೂ ಭರವಸೆಯಾಗಿಯೇ ಉಳಿದಿವೆ. ಪಕ್ಷದ ಕಾಯಕರ್ತರು ಈ ಕುರಿತು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸಬೇಕು. ಹಾಗೆಯೇ ಹಿಂದಿನ ಸಿದ್ದರಾಮಯ್ಯ ಸರಕಾರ, ಈಗಿನ ಸಮ್ಮಿಶ್ರ ಸರಕಾರದ ಜನಪರ, ಅಭಿವೃದ್ಧಿ ಯೋಜನೆಗಳ ಕುರಿತೂ ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.

371 ನೇ ಕಲಂ ತಿದ್ದುಪಡಿ ಕಾಂಗ್ರೆಸ್‍ನ ಕೊಡುಗೆಯಾಗಿದೆ. ಸಾಲ ಮನ್ನಾ ಸೇರಿದಂತೆ ಹಲವು ಉಪಯುಕ್ತ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇವೆಲ್ಲವುಗಳ ಬಗ್ಗೆ ಮತದಾರರಿಗೆ ತಿಳಿಸಿಕೊಡಬೇಕು ಎಂದು ಸಚಿವರು ಹೇಳಿದರು.

ನಗರ ಶಾಸಕರೂ ಆಗಿರುವ ಸಚಿವ ರಹೀಂ ಖಾನ್ ಮಾತನಾಡಿ, ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್‍ಗೆ ಎಲ್ಲಕ್ಕೂ ಅಧಿಕ ಲೀಡ್ ಕೊಡಿಸುವುದಾಗಿ ಭರವಸೆ ನೀಡಿದರು.

ನಗರ ಸೇರಿದಂತೆ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಭಾರೀ ಮತಗಲ ಅಂತರಿದಂದ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದರು.

ವಿದಾನ ಪರಿಷತ್ ಸದಸ್ಯ ವಿಜಯಸಿಂಗ್ ಮಾತನಾಡಿ, ಪಕ್ಷದ ಗೆಲುವಿಗಾಗಿ ಶ್ರಮಿಸುವುದಾಗಿ ಹೇಳಿದರು. ಧರ್ಮಸಿಂಗ್ ಪರಿವಾರ ಪಕ್ಷ ನಿಷ್ಠೆಗೆ ಹೆಸರಾಗಿದೆ. ಈ ಪರಂಪರೆ ಮುಂದುವರೆಯಲಿದೆ ಎಂದು ಭರವಸೆ ನೀಡಿದರು. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದರು.

ಮಾಜಿ ಶಾಸಕ ಅಶೋಕ ಖೇಣಿ, ಗುರಮ್ಮ ಸಿದ್ದಾರೆಡ್ಡಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡರಾದ ವಿಜಯಕುಮಾರ ಕೌಡಾಳೆ, ಮೀನಾಕ್ಷಿ ಸಂಗ್ರಾಮ, ಕೆ. ಪುಂಡಲೀಕರಾವ್ ಮತ್ತಿತರ ಗಣ್ಯರು, ಜಿಪಂ ತಾಪಮ ಸದಸ್ಯರು, ಪಕ್ಷದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ