ಬೆಂಗಳೂರು,ಏ.8- ಸಂಸದರ ಆದರ್ಶ ಗ್ರಾಮ ಯೋಜನೆಯಡಿ ತಾವು ಶೇ.100ಕ್ಕೆ 100ರಷ್ಟು ಅನುದಾನ ಬಳಸಿಕೊಂಡು ಅಭಿವೃದ್ಧಿ ಮಾಡಿದ್ದು ಇದರ ಬಗ್ಗೆ ಇತ್ತೀಚೆಗೆ ಬಿ ಪ್ಯಾಕ್ ಬಿಡುಗಡೆ ಮಾಡಿರುವ ವರದಿಯಲ್ಲೂ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದಗೌಡ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಟರಾಯನ ಪುರ ಮತ್ತು ಯಶವಂತಪುರದ ತಲಾ ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ಸಂಸದರ ಅನುದಾನ ಬಳಸಿಕೊಂಡು ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಅವಲೋಕಿಸಿ ಬಿ ಪ್ಯಾಕ್ ಮೆಚ್ಚುಗೆ ವ್ಯಕ್ತಪಡಿಸಿದೆ.ಇದು ತಮ್ಮ ಸಾಧನೆಯನ್ನು ಗುರುತಿಸಿರುವುದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ನಡುವೆ ಕೊಂಡಿಯಾಗಿ ನಾನು ಕೇಂದ್ರ ಸಚಿವನಾಗಿ ಕೆಲಸ ಮಾಡಿದ್ದೇನೆ. ಮಹದಾಯಿ ವಿಚಾರ, ರಕ್ಷಣಾ ಇಲಾಖೆಯಿಂದ ಜಾಗ ಪಡೆದು ಇತಿಹಾಸ ನಿರ್ಮಿಸಲಾಗಿದೆ. ಕನ್ನಡಕ್ಕೆ ಶಾಸ್ತ್ರೀಯ ಭಾಷೆ ಸ್ಥಾನಮಾನ ದೊರೆಯುವಲ್ಲೂ ಅಂತರ್ಶಕ್ತಿಯಾಗಿ ಕೆಲಸ ಮಾಡಿದ್ದೇನೆ ಎಂದು ವಿವರಿಸಿದರು.
ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ
ಕೇಂದ್ರ ಮಾನವ ಸಂಪನ್ಮೂಲ ಸಚಿವರೊಂದಿಗೆ ಮಾತನಾಡಿ ಯಶವಂತಪುರಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರು ಮಾಡಿಸುವಲ್ಲಿ ಯಶಸ್ವಿಯಾಗಿದ್ದೇನೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಪೌರ ಕಾರ್ಮಿಕರಿಗೆ ವೇತನ ನೀಡಿಕೆಯನ್ನು ಸರಳಗೊಳಿಸಿದೆ.ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆಯಾಗುವ ಪ್ರಮುಖ ತೀರ್ಮಾನ ಕೈಗೊಂಡೆ ಎಂದು ಹೇಳಿದರು.
ಸಿಎಂ ಆಗಿದ್ದಾಗ ವಿರೋಧವನ್ನೂ ಲೆಕ್ಕಿಸದೇ ಐದನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದೆ.ವರದಿಯ ಶಿಫಾರಸುಗಳು ಜಾರಿಗೆ ಬಂದು ಲಕ್ಷಾಂತರ ಸಂಖ್ಯೆಯ ಸರಕಾರಿ ನೌಕರರಿಗೆ ಅನುಕೂಲವಾಯಿತು. ನಮ್ಮ ಕಾಲದಲ್ಲಿ ಜಾರಿಗೆ ತಂದ ಸಕಾಲ ಯೋಜನೆ ಈಗ ಮನೆಮಾತಾಗಿರುವುದು ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಎಂದು ಬಣ್ಣಿಸಿದರು.
ರಾಜ್ಯದಲ್ಲಿ 849 ನೋಟರಿಗಳ ನೇಮಕ
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವನಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಾಮಾಣಿಕ ಕೆಲಸ ಮಾಡಿದ್ದೇನೆ. 1175 ನಿರುಪಯುಕ್ತ ಕಾನೂನುಗಳನ್ನು ತೆಗೆದು ಹಾಕಲಾಗಿದೆ.ದೇಶದಲ್ಲಿ ಬರೋಬ್ಬರಿ 2230 ನೋಟರಿಗಳನ್ನು ನೇಮಕ ಮಾಡಿಕೊಳ್ಳಲಾಯಿತು.ಇದರಲ್ಲಿ ಕರ್ನಾಟಕದಲ್ಲಿ 940 ನೋಟರಿಗಳು ನೇಮಕವಾಗಿದ್ದಾರೆ ಎಂದು ಮಾಹಿತಿ ನೀಡಿದರು.
ರೈಲ್ವೆ ಸಚಿವನಾಗಿ ರಾಜ್ಯಕ್ಕೆ ಹಲವು ಹೊಸ ರೈಲುಗಳನ್ನು ನೀಡಿದ್ದೇನೆ. ಹೀಗೆ ಹೇಳುತ್ತಾ ಹೋದರೆ ಸಾಕಷ್ಟು ವಿಷಯಗಳಿವೆ. ಪ್ರಜ್ಞಾವಂತ ಮತದಾರರು ಇದನ್ನೆಲ್ಲಾ ಗಮನಿಸಿದ್ದು ಪುನಃ ತಮ್ಮನ್ನು ಆಯ್ಕೆ ಮಾಡಲಿದ್ದಾರೆ.ಕೇಂದ್ರದಲ್ಲಿ ನರೇಂದ್ರ ಮೋದಿಯವರು ಮಾಡಿರುವ ಅಭಿವೃದ್ಧಿ ಕಾರ್ಯಗಳೂ ಗೆಲುವಿಗೆ ಪೂರಕವಾಗಲಿವೆ ಎಂದು ಸದಾನಂದಗೌಡರು ವಿಶ್ವಾಸ ವ್ಯಕ್ತಪಡಿಸಿದರು.