ರಾಹುಲ್ ಗಾಂಧಿ ಪ್ರವಾಸ ಹಿನ್ನಲೆ-ಹಿರಿಯ ನಾಯಕರ ಜೊತೆ ಸಭೆ ನಡೆಸಿದ ವೇಣುಗೋಪಾಲ್

ಬೆಂಗಳೂರು, ಏ.7- ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರು ಏ.13ರಂದು ಮೈಸೂರು ಮತ್ತು ಕೋಲಾರ ಜಿಲ್ಲೆಯಲ್ಲಿ ಪ್ರವಾಸ ಮಾಡಿ ಪ್ರಚಾರ ನಡೆಸುವುದರಿಂದ ಕಾರ್ಯಕ್ರಮದ ಪೂರ್ವ ಸಿದ್ಧತೆಗಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಇಂದು ಕಾಂಗ್ರೆಸ್ ಹಿರಿಯ ನಾಯಕರ ಜತೆ ಮಹತ್ವದ ಸಭೆ ನಡೆಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪಮರೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಜತೆ ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು.

ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು 21ರಲ್ಲಿ ಕಾಂಗ್ರೆಸ್ 7ರಲ್ಲಿ ಜೆಡಿಎಸ್ ಸ್ಪರ್ಧಿಸಿದೆ. ಜೆಡಿಎಸ್ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವಿರುದ್ಧವಾಗಿ ಕೆಲಸ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಜೆಡಿಎಸ್ ಕಾರ್ಯಕರ್ತರು ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.

ಮೈತ್ರಿ ಉದ್ದೇಶವೇ ವಿಫಲವಾಗಿದ್ದು, ಬಹಳಷ್ಟು ಕ್ಷೇತ್ರಗಳಲ್ಲಿ ಈ ರೀತಿಯ ಪ್ರತಿಕಾರದ ರಾಜಕಾಣ ನಡೆಯುತ್ತಿದೆ.ಅದರಲ್ಲೂ ಮಂಡ್ಯ, ಮೈಸೂರು, ಹಾಸನ, ತುಮಕೂರು, ಉತ್ತರ ಕನ್ನಡ, ಬಿಜಾಪುರ ಕ್ಷೇತ್ರಗಳಲ್ಲಿ ಪರಸ್ಪರ ದೋಸ್ತಿ ಪಕ್ಷಗಳೇ ಕೆಸರೆಚಾಟಕ್ಕೆ ಇಳಿದಿವೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಮೈತ್ರಿ ವಿರುದ್ಧವಾಗಿ ಕೆಲಸ ಮಾಡುವ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಕ್ಷ ಬಿಟ್ಟು ಹೋಗಿ ಎಂದು ಖಾರವಾಗಿ ಹೇಳಿದ್ದಾರೆ.ಜೆಡಿಎಸ್ ವರಿಷ್ಠ ದೇವೇಗೌಡರಂತೂ ಮೈತ್ರಿ ವಿರುದ್ಧ ಕೆಲಸ ಮಾಡುವವರನ್ನು ಮುಲಾಜಿಲ್ಲದೆ ಹೊರ ಹಾಕುತ್ತೇನೆ ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.ಆದಾಗ್ಯೂ ಪರಸ್ಪರ ಜಿದ್ದಾಜಿದ್ದಿನ ರಾಜಕಾರಣ ಕಡಿಮೆಯಾಗಿಲ್ಲ.

ಕಾಂಗ್ರೆಸ್‍ನ ಪ್ರಭಾವಿ ನಾಯಕರೇ ಮೈತ್ರಿ ವಿರುದ್ಧ ನಿಂತಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೋ, ಬೇಡವೋ ಎಂಬ ಜಿಜ್ಞಾಸೆ ರಾಜ್ಯ ನಾಯಕರನ್ನು ಕಾಡುತ್ತಿದೆ.

ಹೀಗಾಗಿ ಇಂದು ವೇಣುಗೋಪಾಲ್ ಅವರು ರಾಜ್ಯ ನಾಯಕರ ಜತೆ ಸಭೆ ನಡೆಸಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರನ್ನು ಮುಲಾಜಿಲ್ಲದೆ ಹೊರ ಹಾಕಿ ಎಂಬ ಕಠಿಣ ಸಂದೇಶ ರವಾನಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಆದೇಶದನ್ವಯ ಎಷ್ಟೇ ದೊಡ್ಡ ಮುಖಂಡರಾಗಿದ್ದರೂ ಅವರು ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸಿದ್ದರೆ ಉಚ್ಚಾಟನೆ ಮಾಡಬೇಕೆಂಬ ನಿರ್ಧಾರ ತೆಗೆದುಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ