ಉತ್ತರ ಕರ್ನಾಟಕದಲ್ಲಿ ಮುಗಿಲು ಮುಟ್ಟಿದ ಪ್ರಚಾರದ ಭರಾಟೆ

ಬೆಂಗಳೂರು,ಏ.7- ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರದ ಭರಾಟೆ ಮುಗಿಲು ಮುಟ್ಟಿದ್ದು, ಹೈವೋಲ್ಟೇಜ್ ಕ್ಷೇತ್ರಗಳಾಗಿರುವ ಕಲಬುರಗಿ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಬಳ್ಳಾರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮಾತಿನ ಸಮರ ಜೋರಾಗಿದೆ. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು, ಬೆಂಬಲಿಗರು ನಾನಾ ಕಸರತ್ತು ನಡೆಸಿದ್ದಾರೆ.ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಪ್ರಚಾರದಲ್ಲಿ ಬೆವರಿಳಿಸುತ್ತಿದ್ದಾರೆ.

ಕಲಬುರಗಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಮಲ್ಲಿಕಾರ್ಜುನ ಖರ್ಗೆ ಮಠ ಮಂದಿರ, ದೇಗುಲಗಳಿಗೆ ಎಡತಾಕುತ್ತಿದ್ದಾರೆ.ಜೊತೆಗೆ ಅನ್ಯ ಪಕ್ಷದ ಮುಖಂಡರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ವಿವಿಧ ಸಮುದಾಯದ ಸಮಾವೇಶಗಳು, ಪಕ್ಷದ ಸಭೆ ಸಮಾರಂಭ, ರೋಡ್ ಶೋಗಳ ಮೂಲಕ ಮತಯಾಚನೆ ಮಾಡುತ್ತಿದ್ದಾರೆ.ಇವರಿಗೆ ಸೆಡ್ಡು ಹೊಡೆದು ನಿಂತಿರುವ ಇವರ ಶಿಷ್ಯ ಬಿಜೆಪಿಯ ಅಭ್ಯರ್ಥಿ ಉಮೇಶ್ ಜಾಧವ್ ಅವರು ಅಬ್ಬರದ ಪ್ರಚಾರ ನಡೆಸಿದ್ದಾರೆ.

ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಚುನಾವಣಾ ಉಸ್ತುವಾರಿ ಹೊಣೆ ಹೊತ್ತಿದ್ದು ಬಂಜಾರ ಸಮುದಾಯದ ಮತಗಳನ್ನು ಸೆಳೆಯಲು ನಾನಾ ಕಸರತ್ತುಗಳನ್ನು ನಡೆಸಿದ್ದಾರೆ.ಉಮೇಶ್ ಜಾಧವ್ ಅವರೂ ಕೂಡ ವಿವಿಧ ಮಠಾಧೀಶರ ಮೊರೆ ಹೋಗಿದ್ದಾರೆ. ಹಲವು ಬಿಜೆಪಿ ಮುಖಂಡರು ಇಲ್ಲಿ ಮೊಕ್ಕಾ ಹೂಡಿದ್ದು ಇವರ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ.

ಹುಕ್ಕೇರಿಯಲ್ಲಿ ಸಂಸದ ಪ್ರಕಾಶ್ ಹುಕ್ಕೇರಿ ಪರವಾಗಿ ಅವರ ಕುಟುಂಬದವರು, ಬೆಂಬಲಿಗರು, ಪಕ್ಷದ ಕಾರ್ಯಕರ್ತರು ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಅಣ್ಣಾ ಸಾಹೇಬ್ ಜೊಲ್ಲೆ ಪರವಾಗಿ ಅವರ ಪತ್ನಿ ಶಾಸಕಿ ಶಶಿಕಲಾ ಜೊಲ್ಲೆ ಕಣಕ್ಕಿಳಿದು ವ್ಯಾಪಕ ಪ್ರಚಾರ ನಡೆಸುತ್ತಿದ್ದಾರೆ.

ಕೊಪ್ಪಳದಲ್ಲಿ ಕರಡಿ ಸಂಗಣ್ಣ ಪರವಾಗಿ ಬಿಜೆಪಿ ಮುಖಂಡರು ಪ್ರಚಾರ ನಡೆಸುತ್ತಿದ್ದಾರೆ.ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಅವರನ್ನು ಗೆಲ್ಲಿಸಲೇ ಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಕುಂ ನೀಡಿದ್ದಾರೆ.ಅವರನ್ನು ಗೆಲ್ಲಿಸದಿದ್ದರೆ ನನಗೆ ಮುಖ ತೋರಿಸಬೇಡಿ ಎಂದು ಹೇಳಿದ್ದಾರೆ.

ಇತ್ತ ಬಳ್ಳಾರಿಯಲ್ಲಿ ಶ್ರೀರಾಮುಲು, ಜಗದೀಶ್ ಶೆಟ್ಟರ್ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪ ಅವರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದಾರೆ.ಉಗ್ರಪ್ಪ ಅವರನ್ನು ಮತ್ತೊಮ್ಮೆ ಗೆಲ್ಲಿಸಿಕೊಳ್ಳಲು ಡಿ.ಕೆ.ಶಿವಕುಮಾರ್ ಹೊಸ ಪ್ಲ್ಯಾನ್ ರೂಪಿಸುತ್ತಿದ್ದಾರೆ.ಬಳ್ಳಾರಿಯ ಎಲ್ಲಾ ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ.ಈ ನಡುವೆ ಉಗ್ರಪ್ಪ ರೋಡ್ ಶೋ ಬಹಿರಂಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.ದೇವೇಂದ್ರಪ್ಪ ತಮ್ಮ ಬೆಂಬಲಿಗರೊಂದಿಗೆ ಹಳ್ಳಿ ಹಳ್ಳಿಗೆ, ಗಲ್ಲಿ ಗಲ್ಲಿಗೆ ತೆರಳಿ ಮತ ಪ್ರಚಾರ ನಡೆಸುತ್ತಿದ್ದಾರೆ.

ಧಾರವಾಡದಲ್ಲಿ ಪ್ರಚಾರದ ಭರಟೆ ಮುಗಿಲು ಮುಟ್ಟಿದೆ.ಕಾಂಗ್ರೆಸ್‍ನ ವಿನಯ್ ಕುಲಕರ್ಣಿ, ಬಿಜೆಪಿಯ ಪ್ರಹ್ಲಾದ ಜೋಶಿಯವರ ಪ್ರಚಾರ ತಾರಕಕ್ಕೇರಿದೆ.ವಾಕ್ಸಮರ, ಆರೋಪ – ಪ್ರತ್ಯಾರೋಪಗಳು ಕೇಳಿಬಂದಿವೆ. ಎಲ್ಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎರಡೂ ಪಕ್ಷಗಳ ಪ್ರಚಾರದ ಅಬ್ಬರ ಬಿಸಿಲನ್ನೂ ಲೆಕ್ಕಿಸದೇ ಪ್ರಚಾರ ಸಾಗಿದೆ.

ರಾಯಚೂರಿನಲ್ಲಿ ಬಿ.ವಿ.ನಾಯಕ್, ರಾಜಾ ಅಮರೇಶ್ ನಾಯಕ್ ಅವರ ನಡುವಿನ ಪ್ರಚಾರದ ಅಬ್ಬರ ಜೋರಾಗಿದ್ದು ಎರಡೂ ಪಕ್ಷಗಳ ಕಾರ್ಯಕರ್ತರು ತಮ್ಮ ನಾಯಕರ ಗೆಲುವಿಗೆ ಪಣ ತೊಟ್ಟು ಮತದಾರರನ್ನು ಸೆಳೆಯಲು ಸೆಣೆಸಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಬಿಜೆಪಿಯ ಪ್ರಚಾರದ ಅಬ್ಬರ ಜೋರಾಗಿದೆ.ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜಪ್ಪ ಪರ ಶ್ಯಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಅವರು ಪ್ರಚಾರ ನಡೆಸುತ್ತಿದ್ದಾರೆ.ಬೀದರ್‍ನಲ್ಲಿ ಈಶ್ವರ್ ಖಂಡ್ರೆ ಹವಾ ಜೋರಾಗಿದೆ.ಬಿಜೆಪಿಯ ಭಗವಂತ್ ಖೂಬಾ ಪರವಾಗಿ ಬಿಜೆಪಿ ಕಾರ್ಯಕರ್ತರು ಮತ ಯಾಚನೆ ನಡೆಸುತ್ತಿದ್ದಾರೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ಭಿನ್ನಮತದ ನಡುವೆಯೂ ಪ್ರಚಾರ ಕಾವು ಜೋರಾಗಿದೆ.ಸುರೇಶ್ ಅಂಗಡಿ, ವಿರೂಪಾಕ್ಷಪ್ಪ ಸಾಧುನವರ್ ಬೆಂಬಲಿಗರ ಜೊತೆಗೆ ಎರಡೂ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಬೆವರಿಳಿಸುತ್ತಿದ್ದಾರೆ.

ಏ.23ರಂದು ಚುನಾವಣೆ ನಡೆಯಲಿದ್ದು ಕಾಂಗ್ರೆಸ್ ಮುಖಂಡರ ಸಮಾವೇಶ, ಬಿಜೆಪಿಯಿಂದ ಮೋದಿಯವರ ಬಹಿರಂಗ ಸಮಾವೇಶಗಳನ್ನು ಆಯೋಜಿಸಲಾಗಿದೆ.

ಮತದಾರ ಪ್ರಭು ಯಾರತ್ತ ವಾಲುತ್ತಾನೆ, ಯಾರ ಕೈ ಹಿಡಿಯಲಿದ್ದಾನೆ ಎಂಬುದಕ್ಕೆ ಮೇ.23ರವರೆಗೆ ಕಾಯಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ