ಬೆಂಗಳೂರು-ಮಾಜಿ ಉಪ ಮುಖ್ಯಮಂತ್ರಿ, ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪಗೆ ಜೀವ ಬೆದರಿಕೆ ಕರೆ ಬಂದಿದೆ.ಕರೆ ಮಾಡಿದ ವ್ಯಕ್ತಿ ಉರ್ದುವಿನಲ್ಲಿ ನಿಂದನೆ ಮಾಡಿದ್ದಾನೆ.
ಕಳೆದ ರಾತ್ರಿ ಕೆ.ಎಸ್.ಈಶ್ವರಪ್ಪ ಅವರು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಾಪಸ್ ಆಗುವಾಗ ಅನಾಮಧೇಯ ವ್ಯಕ್ತಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾನೆ.
ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಮೊದಲು ಉರ್ದು ಮಿಶ್ರಿತ ಕನ್ನಡದಲ್ಲಿ ಮಾತನಾಡಿದ ವ್ಯಕ್ತಿ, ‘ನಿಮಗೆ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ’ ಎಂದು ಬೆದರಿಕೆ ಹಾಕಿದ್ದಾನೆ. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳಿಗೆ ಈ ಕುರಿತು ದೂರು ನೀಡಲು ಈಶ್ವರಪ್ಪ ನಿರ್ಧರಿಸಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರಿಗೆ ಎರಡು ಬಾರಿ ವ್ಯಕ್ತಿ ಕರೆ ಮಾಡಿದ್ದಾನೆ. ಕರೆ ಮಾಡಿದ ವ್ಯಕ್ತಿಗೆ ಈಶ್ವರಪ್ಪ ಅವರು ಕೂಡಾ ಬೈದಿದ್ದು, ತಕ್ಷಣ ಆ ವ್ಯಕ್ತಿ ಕರೆ ಕಟ್ ಮಾಡಿದ್ದಾನೆ. ಕರೆ ಮಾಡಿದ ವ್ಯಕ್ತಿ ಕನ್ನಡ ಮತ್ತು ಉರ್ದುವಿನಲ್ಲಿ ಮಾತನಾಡಿದ್ದಾನೆ.
ಬೆದರಿಕೆ ಏಕೆ? : ಕೆ.ಎಸ್.ಈಶ್ವರಪ್ಪ ಅವರು ಮುಸ್ಲಿಂ ಸಮುದಾಯದ ಬಗ್ಗೆ ಕೆಲವು ದಿನಗಳ ಹಿಂದೆ ನೀಡಿದ ಹೇಳಿಕೆ ಹಿನ್ನಲೆಯಲ್ಲಿ ಬೆದರಿಕೆ ಬಂದಿರಬಹುದು ಎಂದು ಶಂಕಿಸಲಾಗಿದೆ.
ಕೆಲವು ದಿನಗಳ ಹಿಂದೆ ಲೋಕಸಭಾ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ್ದ ಈಶ್ವರಪ್ಪ ಅವರು, ‘ರಾಜ್ಯದಲ್ಲಿ ಬಿಜೆಪಿ ಮುಸ್ಲಿಂಮರಿಗೆ ಟಿಕೆಟ್ ಕೊಟ್ಟಿಲ್ಲ. ಕೊಡುವುದೂ ಇಲ್ಲ’ ಎಂದು ಹೇಳಿದ್ದರು.
‘ರಾಜ್ಯದ ಮುಸ್ಲಿಂಮರು ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟಿಲ್ಲ. ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತ ಹಾಕಿದಾಗ ಮಾತ್ರ ಟಿಕೆಟ್ ನೀಡಬಹುದು’ ಎಂದು ಹೇಳಿಕೆ ಕೊಟ್ಟಿದ್ದರು.
‘ಬಿಜೆಪಿ ಮುಸ್ಲಿಂಮರಿಗೆ ಟಿಕೆಟ್ ನೀಡುವುದಿಲ್ಲ ಎಂದು ಟೀಕಿಸುವ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ನಮ್ಮ ಪಕ್ಷ ಸೇರಿ ಹತ್ತು ವರ್ಷ ಕಚೇರಿ ಕಸ ಗುಡಿಸಲಿ. ನಂತರ ಟಿಕೆಟ್ ಕೊಡಬೇಕೋ?, ಬೇಡವೋ? ಎಂದು ತೀರ್ಮಾನಿಸುತ್ತೇವೆ’ ಎಂದು ಹೇಳಿದ್ದರು.