ಕಲಬುರಗಿ,ಏ.7-ಕಲಬುರಗಿ ಕಾಂಗ್ರೆಸ್ನ ಭಿನ್ನಮತ ಬೀದಿಗೆ ಬಂದಿದೆ. ಕಾಂಗ್ರೆಸ್ ಮುಖಂಡ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಜಗರ್ ಚುಲ್ಬುಲ್ ಅವರ ನಿವಾಸದ ಮೇಲೆ ತಡರಾತ್ರಿ ದಾಳಿ ನಡೆಸಿ, ಪೀಠೋಪಕರಣ ಧ್ವಂಸಗೊಳಿಸಿರುವ ಘಟನೆ ನಡೆದಿದೆ.
ತಮ್ಮ ಪಕ್ಷದ ಕಾರ್ಯಕರ್ತರೇ ಮನೆ ಮೇಲೆ ದಾಳಿ ನಡೆಸಿ ಹಲ್ಲೆ ಮಾಡಿರುವುದಕ್ಕೆ ಅಜಗರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಲಬುರಗಿ ಉತ್ತರ ಕ್ಷೇತ್ರದ ಶಾಸಕರ ಬೆಂಬಲಿಗರು ಈ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ಖಮರುಲ್ ಇಸ್ಲಾಂ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು.ಅವರನ್ನು ಸಂಪುಟದಿಂದ ಕೈಬಿಡಲು ಮಲ್ಲಿಕಾರ್ಜುನ ಖರ್ಗೆ ಅವರೇ ಕಾರಣ ಎಂದು ಅಜಗರ್ ಆರೋಪಿಸಿದ್ದರು. ಅಲ್ಲದೇ, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಂಬಲಿಸಿದ್ದಾರೆ ಎನ್ನಲಾಗಿದ್ದು, ಇದೇ ಹಲ್ಲೆಗೆ ಕಾರಣವೆಂದು ತಿಳಿದುಬಂದಿದೆ.
ಖ್ವಾಜಾ ಬಂದೇ ನವಾಜ್ ದರ್ಗಾ ಬಳಿ ಇರುವ ಅಜಗರ್ ನಿವಾಸದ ಮೇಲೆ ದಾಳಿ ಮಾಡಿ, ಹಲ್ಲೆ ನಡೆಸಲಾಗಿದ್ದು ರೋಜಾ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.