ಬೀದರ್. ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾಣೆಯ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ಪರವಾಗಿ ಅಬ್ಬರದ ಪ್ರಚಾರ ನಡೆಯುತ್ತಿದೆ. ನಗರ ಶಾಸಕರೂ ಆಗಿರುವ ಸಚಿವ ರಹೀಂ ಖಾನ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮ ಭೇಟಿ, ರೋಡ್ಶೋ, ಮನೆ ಮನೆ ಭೇಟಿಯಿಂದಾಗಿ ಇಡೀ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಸಂಜೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮಿರಾಗಂಜ್, ಹಮಿಲಾಪುರ, ಗಾದಗಿ, ಖಾಜಾಪುರ ಮತ್ತಿತರ ಗ್ರಾಮಗಳಲ್ಲಿ ರೋಡ್ಶೋ ಮೂಲಕ ಪ್ರಚಾರ ನಡೆಸಿ, ಮತ ಯಾಚನೆ ಮಾಡಲಾಯಿತು.
ಚಿಮಕೊಡ್ ಗ್ರಾಮದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಅಭ್ಯರ್ಥಿ ಈಶ್ವರ ಖಂಡ್ರೆ ಅವರು ಕಾಂಗ್ರೆಸ್ ಸಾಧನೆ ತಿಳಿಸಿದರು. ಹಿಂದಿನ ಸಿದ್ದರಾಮಯ್ಯ ಸರಕಾರ ಹಾಗೂಈಗಿನ ಮೈತ್ರಿ ಸರಕಾರಗಳು ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ಜಾರಿಗೊಳಿಸಿವೆ ಎಂದು ಹೇಳಿದರು.
ಪೌರಾಡಳಿತ ಸಚಿವರಾಗಿದ್ದಾಗ ಕೈಗೊಂಡ ಯೋಜನೆಗಳ ಕುರಿತು ಈಶ್ವರ ಖಂಡ್ರೆ ಮಾಹಿತಿ ನೀಡಿದರು. ನಗರ ಪ್ರದೇಶದಲ್ಲಿ ಮೂಲ ಸೌಕರ್ಯ ಹೆಚ್ಚಿಸುವ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದರು.
ಬಡವರ ಬಗ್ಗೆ, ಅಲ್ಪಸಂಖ್ಯಾತರ ಬಗ್ಗೆ, ದಲಿತರು, ಹಿಂದುಳಿದವರ ಬಗ್ಗೆ ಕಾಂಗ್ರೆಸ್ಗೆ ಪ್ರಾಮಾಣಿಕ ಕಾಳಜಿ ಇದೆ. ಈ ವರ್ಗಗಳ ಹಿತರಕ್ಷಣೆ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ ಎಂದರು.
ಬಿಜೆಪಿಯವರು ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಸುಳ್ಳನ್ನೇ ಸತ್ಯವೆಂದು ಬಿಂಬಿಸುವಲ್ಲಿ ಬಿಜೆಪಿಯವರು ನಿಸ್ಸೀಮರು. ಬಿಜೆಪಿ ನಾಯಕರ ಮಾತಿಗೆ ಮರುಳಾಗಬಾರದು ಎಂದು ಈಶ್ವರ ಖಂಡ್ರೆ ಸಲಹೆ ನೀಡಿದರು.
ಸಚಿವ ರಹೀಂ ಖಾನ್ ಮಾತನಾಡಿ, ಈಶ್ವರ ಖಂಡ್ರೆಯವರು ಸಚಿವರಾಗಿದ್ದಾಗ ಜಾರಿಗೊಳಿಸಿದ ಯೋಜನೆಗಳ ಕುರಿತು ತಿಳಿಸಿದರು. ಜಿಲ್ಲೆಯ ಅಭಿವೃದ್ಧಿಗಾಗಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ದಲಿತ, ಅಲ್ಪಸಂಖ್ಯಾರ, ಹಿಂದುಳಿದ ವರ್ಗಗಳು ಸೇರಿದಂತೆಬೀದರ್ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ ಎಲ್ಲ ಜಾತಿಮತಗಳ ಜನರು ಕಾಂಗ್ರೆಸ್ಅನ್ನು ಬೆಂಬಲಿಸುತ್ತ ಬಂದಿದ್ದಾರೆ. ಈ ಬಾರಿಯೂ ಬೆಂಬಲ ಸಿಗುವ ಭರವಸೆ ಇದೆ. ಜಿಲ್ಲೆಯ ಸರ್ವಾಂಗೀಣ ವಿಕಾಸಕ್ಕಾಗಿ ಕಾಂಗ್ರೆಸ್ಅನ್ನು ಬೆಂಬಲಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಪಕ್ಷದ ಮುಖಂಡ ಅಮೃತರಾವ ಚಿಮಕೋಡೆ, ಜಿಪಂ ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜು ಪಾಟೀಲ್, ಸೂರ್ಯಕಾಂತ ಪಾಟೀಲ್,ಕೆಪಿಸಿಸಿ ಕಾರ್ಯದರ್ಶಿ ಇರ್ಷಾದ್ ಪೈಲವಾನ್ ಮತ್ತಿತರ ಮುಖಂಡರು, ಗಣ್ಯರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.
ಪಾದಯಾತ್ರೆ, ರೋಡ್ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡು ಬೆಂಬಲಿಸಿದರು.