ಮೈಸೂರು, ಏ.7- ಲೋಕಸಭಾ ಚುನಾವಣೆ ನಂತರ ರಾಜ್ಯದ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಭವಿಷ್ಯ ನುಡಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರದ ದುರಾಸೆಗಾಗಿ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿವೆ. ಮೈತ್ರಿಯನ್ನು ಮುಂದಿಟ್ಟುಕೊಂಡೇ ಇದೀಗ ಲೋಕಸಭಾ ಚುನಾವಣೆ ಎದುರಿಸಲು ಎರಡೂ ಪಕ್ಷಗಳ ನಾಯಕರು, ಮುಖಂಡರು ಮುಂದಾಗಿದ್ದಾರೆ.
ಆದರೆ ಕಾರ್ಯಕರ್ತರಿಗೆ ಈ ಮೈತ್ರಿ ಸಮ್ಮತವಿಲ್ಲ. ಹಾಗಾಗಿ ಚುನಾವಣೆ ನಂತರ ಮೈತ್ರಿ ಸರ್ಕಾರ ಪತನವಾಗುವುದು ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರದ ಅಧಿಕಾರದಲ್ಲಿದೆ. ಆದರೆ ಎರಡೂ ಪಕ್ಷಗಳ ನಡುವೆ ಎಲ್ಲೂ ಹೊಂದಾಣಿಕೆ ಕಾಣುತ್ತಿಲ್ಲ. ಅಧಿಕಾರಕ್ಕಾಗಿ ಕೇವಲ ನಾಯಕರು ಹೊಂದಾಣಿಕೆ ಮಾಡಿಕೊಂಡಿದ್ದಾರೆ.ಆದರೆ ಕಾರ್ಯಕರ್ತರು ಮೈತ್ರಿಗೆ ಒಗ್ಗಿಕೊಂಡಿಲ್ಲ. ಯಾವುದೇ ಮೈತ್ರಿ ಸಭೆಗಳಲ್ಲಿ ಭಿನ್ನಮತ ಎದ್ದು ಕಾಣುತ್ತಿದೆ.ಇದು ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ನಡುವೆ ಇರುವ ಅಸಮಾಧಾನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಾಮುಂಡೇಶ್ವರಿ ಕ್ಷೇತ್ರದ ಸೋಲಿನ ಕಹಿಯನ್ನು ಮರೆತಿಲ್ಲ. ಹಾಗಾಗಿ ಈ ಚುನಾವಣೆಯಲ್ಲಿ ಸೇಡು ತೀರಿಸಿಕೊಳ್ಳಲು ಪ್ಲಾನ್ ಮಾಡಿದ್ದಾರೆ ಎಂದು ತಿಳಿಸಿದರು.
ಈ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ ಸಿಂಹ ಹಾಗೂ ಶ್ರೀನಿವಾಸ ಪ್ರಸಾದ್ ಗೆದ್ದ ನಂತರ ಪರಿವಾರ ಮತ್ತು ತಳವಾರ ಸಮುದಾಯಗಳನ್ನು ನಾಯಕ ಜನಾಂಗಕ್ಕೆ ಸೇರಿಸುವ ಕಾರ್ಯಕ್ಕೆ ರಾಜ್ಯಸಭೆಯಲ್ಲಿ ತಿದ್ದುಪಡಿ ತರಲಿದ್ದಾರೆ ಎಂದು ಹೇಳಿದರು.
ಚಾಮರಾಜ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಪ್ರಸಾದ್ ಮಾತನಾಡಿ, ಸಂವಿಧಾನ ಬದಲಾವಣೆ ಮಾಡುವುದು ಮಗ್ಗಿ ಪುಸ್ತಕ, ಪಠ್ಯ ಪುಸ್ತಕದಂತೆ ಅಲ್ಲ.
ಸಂವಿಧಾನದ ಬಗ್ಗೆ ಮಾತನಾಡುವಾಗ ಯಾರೇ ಆಗಲಿ ಎಚ್ಚರಿಕೆಯಿಂದ ಮಾತನಾಡಬೇಕು ಎಂದು ಹೇಳಿದರು.
ಸಂವಿಧಾನದ ಮೂಲ ಆಶಯವನ್ನು ಬದಲಾವಣೆ ಮಾಡಲು ಲೋಕಸಭೆಗೂ ಇಲ್ಲ ಎಂಬುದಾಗಿ ಸುಪ್ರೀಂಕೋರ್ಟ್ ಹೇಳಿದೆ ಎಂದು ತಿಳಿಸಿದರು.
ಮೈಸೂರು-ಕೊಡಗು ಲೋಕಸಭಾ ಚುನಾವಣೆ ಅಭ್ಯರ್ಥಿ ಪ್ರತಾಪಸಿಂಹ ಮಾತನಾಡಿ, ನಾವು ಗೆದ್ದ ನಂತರ ಪರಿವಾರ ಮತ್ತು ತಳವಾರ ಸಮುದಾಯದವರನ್ನು ಎಸ್ಟಿಗೆ ಸೇರಿಸುವ ಸಂಬಂಧ ಮೊದಲ ಆದ್ಯತೆಯಲ್ಲಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.