ಕಾಂಗ್ರೇಸ್-ಜೆಡಿಎಸ್ ಗೊಂದಲಕ್ಕೆ ತೆರೆ-ಎಚ್.ವಿಶ್ವನಾಥ್

ಮೈಸೂರು,ಏ.7- ಮೈಸೂರು-ಕೊಡಗು ಕ್ಷೇತ್ರ ವ್ಯಾಪ್ತಿಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಇದ್ದ ಗೊಂದಲಕ್ಕೆ ತೆರೆ ಎಳೆಯಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದರು.

ಖಾಸಗಿ ಹೋಟೆಲ್‍ನಲ್ಲಿಂದು ನಡೆದ ಕಾಂಗ್ರೆಸ್-ಜೆಡಿಎಸ್ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವವರೆಗೂ ಗೊಂದಲವಿತ್ತು. ಆದರೆ ಅಧಿಕೃತ ಅಭ್ಯರ್ಥಿಯಾಗಿ ವಿಜಯಶಂಕರ್ ನಾಮಪತ್ರ ಸಲ್ಲಿಸಿದ ನಂತರ ನಮ್ಮ ಎರಡೂ ಪಕ್ಷಗಳ ನಡುವೆ ಯಾವುದೇ ಗೊಂದಲ ಇಲ್ಲ ಎಂದು ಹೇಳಿದರು.

ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ನಾಳೆಯಿಂದ ಮೈಸೂರು-ಕೊಡುಗು ಕ್ಷೇತ್ರಗಳ ಪ್ರಚಾರದಲ್ಲಿ ತೊಡಗಿಕೊಳ್ಳಲಿದ್ದಾರೆ. ನಮ್ಮ ಅಭ್ಯರ್ಥಿಯ ಗೆಲುವಿಗೆ ನಾವೆಲ್ಲ ಒಟ್ಟಾಗಿ ಶ್ರಮಿಸುತ್ತೇವೆ ಎಂದು ತಿಳಿಸಿದರು.

ಈ ಬಾರಿಯ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ವಿಜಯಶಂಕರ್ ಅವರು ಕೊಡುಗು ಕ್ಷೇತ್ರದಲ್ಲಿ ಹೆಚ್ಚು ಮತಗಳನ್ನು ಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹುಣಸೂರಿನಿಂದ ನಾಳೆ ಪ್ರಚಾರ ಕಾರ್ಯ ಆರಂಭಿಸಿ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಚಾರ ಕೈಗೊಳ್ಳುತ್ತೇವೆ. ಎಲ್ಲ ಜಾತಿ, ಧರ್ಮದವರನ್ನು ಒಟ್ಟಾಗಿ ಕರೆದೊಯ್ದು ಉತ್ತಮ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ರಾಜ್ಯದ 28 ಕ್ಷೇತ್ರಗಳನ್ನೂ ಗೆಲ್ಲಲ್ಲು ನಾವು ಶ್ರಮಿಸುತ್ತೇವೆ ಎಚ್.ವಿಶ್ವನಾಥ್ ತಿಳಿಸಿದರು.

ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಎಚ್.ಸಿ.ಮಹದೇವಪ್ಪ ಮಾತನಾಡಿ, ಕೋಮು ಶಕ್ತಿಯನ್ನು ಹಿಮ್ಮೆಟ್ಟಿಸಲು ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಮಾತ್ರ ಸೀಮಿತವಲ್ಲ ಎಂದು ಹೇಳಿದರು.

ಎರಡೂ ಪಕ್ಷಗಳಲ್ಲಿನ ಕಾರ್ಯಕರ್ತರು, ಮುಖಂಡರು ಮೈತ್ರಿ ಪಕ್ಷ ತತ್ವ ಸಿದ್ದಾಂತಗಳನ್ನು ಅರ್ಥ ಮಾಡಿಕೊಂಡು ಸ್ವಾರ್ಥ, ನಷ್ಟಗಳನ್ನು ಮರೆತು ತ್ಯಾಗ ಮನೋಭಾವದಿಂದ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ನಮ್ಮ ವಿರೋಧಿಗಳು ಪತ್ರಿಕೆಗಳಲ್ಲಿ ಪ್ರಿಂಟ್ ಹಾಕಿಸಿಕೊಂಡು ತಾವು ಮಾಡಿದ್ದೆಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಅವಧಿಯಲ್ಲಿನ ಹಲವು ಅಭಿವೃದ್ದಿ ಕಾರ್ಯಗಳನ್ನು ನಮ್ಮ ವಿರೋಧಿಗಳು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಕೋಮುಶಕ್ತಿ ಬೆಳೆಯಬಾರದೆಂಬ ಹಿನ್ನೆಲೆಯಲ್ಲಿ ನಾವು ಒಂದಾಗಿದ್ದೇವೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರು ಅರ್ಥ ಮಾಡಿಕೊಂಡಿದ್ದಾರೆ.

ಹಾಗಾಗಿ ಮುಂದಿನ ದಿನಗಳಲ್ಲಿ ನಮ್ಮ ಎರಡೂ ಪಕ್ಷಗಳ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲಿದ್ದಾರೆ ಎಂದು ಎಚ್.ಮಹದೇವಪ್ಪ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್, ಅಭ್ಯರ್ಥಿಗಳಾದ ವಿಜಯಶಂಕರ್, ಧೃವನಾರಾಯಣ್, ಶಾಸಕ ತನ್ವೀರ್ ಮುಂತಾದವರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ