ದೆಹಲಿ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಗುಪ್ತಚರ ಇಲಾಖೆ ಇತ್ತೀಚಿಗೆ ನೀಡಿರುವ ಮಾಹಿತಿ ಪ್ರಕಾರ, ಪಾಕಿಸ್ತಾನ ಬೆಂಬಲಿತ ಉಗ್ರಗಾಮಿ ಸಂಘಟನೆ ಜೈಶ್-ಎ-ಮೊಹಮ್ಮದ್ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ದಾಳಿಗೆ ಪ್ರಯತ್ನಿಸುತ್ತಿದ್ದು, ಕಣಿವೆ ರಾಜ್ಯದಲ್ಲಿ ದಾಳಿ ನಡೆಸಲು ಐಎಸ್ಐ ಸೇರಿದಂತೆ ಮೂರು ಭಯೋತ್ಪಾದಕ ತಂಡಗಳನ್ನು ಸೃಷ್ಟಿಸಿದೆ ಎನ್ನಲಾಗಿದೆ. ಈ ವಾರದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇದಕ್ಕಾಗಿ ಪಾಕಿಸ್ತಾನ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದು, ಉಗ್ರರು ಎಪ್ರಿಲ್ 5ರಿಂದ ಎಪ್ರಿಲ್ 9 ನಡುವೆ ಯಾವುದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಬಹುದು ಎಂದು ಮಾಹಿತಿ ತಿಳಿದು ಬಂದಿದ್ದು, ಈ ಹಿನ್ನೆಲೆಯಲ್ಲಿ ಸೇನೆ ಮತ್ತು ಭದ್ರತಾ ಪಡೆಗಳನ್ನು ಅಲರ್ಟ್ ಆಗಿರುವಂತೆ ತಿಳಿಸಲಾಗಿದೆ.
ಮಾಹಿತಿ ಪ್ರಕಾರ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಶಾಂತಿ ಪ್ರಕ್ರಿಯೆಯನ್ನು ಹಾಳುಮಾಡಲು ಪಾಕಿಸ್ತಾನವು ಯತ್ನಿಸುತ್ತಿದೆ. ಹೀಗಾಗಿಯೇ ಚುನಾವಣಾ ವೇಳೆ ಒಂದು ಪ್ರಮುಖ ಭಯೋತ್ಪಾದನಾ ದಾಳಿಯನ್ನು ನಡೆಸಲು ಪಾಕಿಸ್ತಾನ ಯೋಜಿಸುತ್ತಿದೆ ಎನ್ನಲಾಗಿದೆ.
ಪಾಕಿಸ್ತಾನ ಗುಪ್ತಚರ ಸಂಸ್ಥೆ ಕಾಶ್ಮೀರ ಕಣಿವೆಯಲ್ಲಿ ಮೂರು ಗುಂಪುಗಳಾದ ಐಎಸ್ಐ, ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಇ-ತೊಯ್ಬಾಗಳನ್ನು ರಚಿಸಿದೆ. ಈ ತಂಡಗಳು ಚುನಾವಣಾ ಸಮಯದಲ್ಲಿ ಮತಗಟ್ಟೆಗಳ ಮೇಲೆ ಮತ್ತು ಅಭ್ಯರ್ಥಿಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಸಾಧ್ಯತೆಯಿದೆ.
ಏಜೆನ್ಸಿಗಳಿಂದ ಲಭಿಸಿರುವ ಮಾಹಿತಿ ಪ್ರಕಾರ, ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕ ದಾಳಿಗಳಿಗೆ ಭಯೋತ್ಪಾದಕರಿಗೆ ಸ್ಫೋಟಕಗಳನ್ನು ಸರಬರಾಜು ಮಾಡುವ ಮೂಲಕ ಐಎಸ್ಐ ಉಗ್ರಗಾಮಿಗಳಿಗೆ ತರಬೇತಿ ನೀಡಲು ಪ್ರಯತ್ನಿಸುತ್ತಿದೆ.