ಬೆಂಗಳೂರು,ಏ.5- ಲೋಕಸಭಾ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಬಿಸಿಲಿನ ತಾಪದ ನಡುವೆಯೂ ಅಭ್ಯರ್ಥಿಗಳು, ಬೆಂಬಲಿಗರು ಮತದಾರರ ಓಲೈಕೆಗೆ ಬೆವರಿಳಿಸುತ್ತಿದ್ದಾರೆ.ಮತದಾರರ ಮನವೊಲಿಸಲು ನಾನಾ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಮನೆ ಮನೆ ಪ್ರಚಾರ, ರೋಡ್ ಶೋ, ಬಹಿರಂಗ ಸಭೆಗಳ ಮೂಲಕ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಶಕ್ತಿ ಪ್ರದರ್ಶನ ಒಂದೆಡೆಯಾದರೆ, ವಿವಿಧ ಆಫರ್ಗಳ ಮೂಲಕ ಮತದಾರರನ್ನು ಸೆಳೆಯಲು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.
2ನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಏ.8 ಕಡೆಯ ದಿನವಾಗಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಧಗೆ ಹೆಚ್ಚಾಗಿದ್ದು, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಉತ್ತರ ಕನ್ನಡ ಸೇರಿದಂತೆ ಹಲವೆಡೆ ಬೆಳಗ್ಗೆ ಮತ್ತು ಸಂಜೆ ಪ್ರಚಾರದ ಕಾವು ಹೆಚ್ಚಾಗಿದೆ.ಇನ್ನುಳಿದಂತೆ ಮೈಸೂರು, ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಹಾಸನ ಮುಂತಾದೆಡೆ ದಿನವಿಡೀ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಪಕ್ಷದ ಪದಾಧಿಕಾರಿಗಳ ಸಭೆ, ಮುಖಂಡರ ಭೇಟಿ, ಸಮುದಾಯದ ಮುಖಂಡರೊಂದಿಗೆ ಸಮಾಲೋಚನೆ, ವಿವಿಧ ಸಂಘಟನೆಗಳೊಂದಿಗೆ ಸಭೆ, ಜಾತಿವಾರು ನಾಯಕರೊಂದಿಗೆ ಬಿಡುವಿಲ್ಲ ಚರ್ಚೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಅಭ್ಯರ್ಥಿಗಳ ಆಪ್ತರು, ಬೆಂಬಲಿಗರು ಜಾತಿ ಲೆಕ್ಕಾಚಾರ ಸಂಭಾವ್ಯ ಮತ ಗಳಿಸುವ ಲೆಕ್ಕಾಚಾರದಲ್ಲಿ ತೊಡಗಿದ್ದು, ಎಲ್ಲೆಲ್ಲಿ ಮತ ಯಾಚನೆ ಮಾಡಬೇಕು, ಯಾವ್ಯಾವ ಕ್ಷೇತ್ರಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂಬಿತ್ಯಾದಿ ಲೆಕ್ಕಾಚಾರ ಮಾಡುತ್ತಿದ್ದಾರೆ.ಚುನಾವಣೆಗೆ ಕೇವಲ 13ದಿನಗಳಷ್ಟೇ ಬಾಕಿ ಇದೆ.ಬಹಿರಂಗ ಪ್ರಚಾರಕ್ಕೆ 11 ದಿನಗಳನ್ನು ಮಾತ್ರ ಬಾಕಿ ಇರುವ ಹಿನ್ನೆಲೆಯಲ್ಲಿ ಲಕ್ಷಾಂತರ ಮತದಾರರನ್ನು ಅಭ್ಯರ್ಥಿಗಳೇ ತಲುಪಲು ಸಾಧ್ಯವಾಗುವುದಿಲ್ಲ ಹಾಗಾಗಿ ಬೂತ್, ಬ್ಲಾಕ್ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ಹುರಿದುಂಬಿಸುತ್ತಿದ್ದಾರೆ.
ಇದಲ್ಲದೇ ನಾಳೆ ಯುಗಾದಿ ಹಬ್ಬವಿದ್ದು, ನಾಡಿದ್ದು ವರ್ಷದ ತಡಕು ಇರುವ ಹಿನ್ನೆಲೆಯಲ್ಲಿ ಮತದಾರರಿಗೆ ವಿವಿಧ ಉಡುಗೊರೆಗಳನ್ನು ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಅಭ್ಯರ್ಥಿಗಳು ಮತದಾರರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಆಯೋಗದ ಹದ್ದಿನ ಕಣ್ಣಿನ ನಡುವೆಯೂ ಮತದಾರರ ಓಲೈಕೆಯ ಕೆಲಸಗಳು ನಡೆಯುತ್ತಿವೆ.
ಒಟ್ಟಾರೆ ಚುನಾವಣೆಗೆ ದಿನಗಣನೆ ಪ್ರಾರಂಭವಾಗಿದ್ದು, ಚುನಾವಣಾ ಕಾವು ರಂಗೇರತೊಡಗಿದೆ.