ದೇಶದ ಸೈನಿಕರಿಗೆ ನಮನ ಸಲ್ಲಿಸಬೇಕೇ ಹೊರತು ಬಿಜೆಪಿಯವರಿಗಲ್ಲ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಕೆಆರ್‍ಪುರ, ಮಾ.5-ದೇಶದ ಯೋಧರ ಬಗ್ಗೆ ಅಪಾರ ಗೌರವವಿದೆ. ದೇಶದ ಸೈನಿಕರಿಗೆ ನಮನ ಸಲ್ಲಿಸಬೇಕೇ ಹೊರತು ಬಿಜೆಪಿಯವರಿಗಲ್ಲ. ಸರ್ಜಿಕಲ್ ಸ್ಟ್ರೈಕ್ ರಾಜಕೀಯವಾಗಿ ಬಳಸಿಕೊಳ್ಳಲು ನರೇಂದ್ರ ಮೋದಿ ಹಾಗೂ ಬಿಜೆಪಿಯವರು ಪ್ರಯತ್ನ ಪಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೆರೇಗೌಡ ಅವರ ಪರ ಕೆ.ಆರ್.ಪುರದಲ್ಲಿಂದು ಏರ್ಪಡಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಭಾರತ-ಪಾಕಿಸ್ತಾನ್ ಬೇರೆ ಬೇರೆಯಾದ ನಂತರ 12 ಸರ್ಜಿಕಲ್ ಸ್ಟ್ರೈಕ್ , ನಾಲ್ಕು ಯುದ್ಧ್ದ ಮಾಡಲಾಗಿದೆ. ಯಾವತ್ತೂ ರಾಜಕೀಯಕ್ಕೆ ಬಳಸಿಕೊಳ್ಳಲಿಲ್ಲ. ಪಾಕಿಸ್ತಾನದ ಒಂದು ಲಕ್ಷ ಸೈನಿಕರನ್ನು ಸೆರೆ ಹಿಡಿದಿದ್ದಾಗ ಇಂದಿರಾಗಾಂದಿ ಪ್ರಧಾನಿಯಾಗಿದ್ದರು. ಆಗಲೂ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಂಡಿಲ್ಲ. ವಾಜಪೇಯಿ ಅವರೇ ಇಂದಿರಾಗಾಂಧಿಯವರನ್ನು ದುರ್ಗೇ ಎಂದು ಹೊಗಳಿದ್ದರು ಎಂದು ಹೇಳಿದರು.

 ಯುವಕರಿಗೆ ತಪ್ಪು ಮಾಹಿತಿ ನೀಡುವ ಪ್ರಯತ್ನ ಆಗುತ್ತಿದೆ.ನರೇಂದ್ರ ಮೋದಿಯಿಂದಲೇ ದೇಶ ಕಾಪಾಡಲು ಸಾಧ್ಯ ಎಂಬ ತಪ್ಪು ಕಲ್ಪನೆ ಹೊಂದಿದ್ದಾರೆ ಎಂದರು.

ಸದಾನಂದಗೌಡ ಅವರಿಗೆ ಮತ ಕೇಳುವ ಯಾವುದೇ ನೈತಿಕತೆ ಇಲ್ಲ. ನಮ್ಮ ಮುಖ ನೋಡಬೇಡಿ ಮೋದಿ ಮುಖ ನೋಡಿ ಎಂದು ಹೇಳಿ ಮತ ಕೇಳುತ್ತಿದ್ದಾರೆ, ಆದರೆ ಸ್ಥಳೀಯ ಶಾಸಕ ಬೈರತಿ ಬಸವರಾಜ ನಾನು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದೇನೆ ಎಂದು ಧೈರ್ಯವಾಗಿ ಮತ ಕೇಳುತ್ತಿದ್ದಾರೆ. ಹಾಗಾಗಿ ಬಿಜೆಪಿಯವರಿಗೆ ಭಯ ಶುರುವಾಗಿದೆ ಎಂದು ತಿಳಿಸಿದರು.

ಒಂದು ಸಾವಿರ ಕೋಟಿ ಕೆಆರ್‍ಪುರಕ್ಕೆ ನೀಡಿ ಅಭಿವೃದ್ಧಿ ಮಾಡಿದ್ದೇನೆ. ಬೈರತಿ, ಸೋಮಶೇಖರ್ ಅವರ ಒಗ್ಗಟ್ಟಿನ ಹಟದಿಂದ 110 ಹಳ್ಳಿಗೆ ನೀರು ಮತ್ತು ಯುಜಿಡಿ ಕಾರ್ಯ ತರಲಾಗಿದೆ ಎಂದು ಹೇಳಿದರು.

ಮೋದಿಯವರು ಉದ್ಯೋಗ ಸೃಷ್ಟಿ ಮಾಡಿದ್ರ? ಬಿಎಸ್‍ಎನ್‍ಎಲ್‍ನಲ್ಲಿ 50 ಸಾವಿರ ಜನ ಕೆಲಸ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಿದೆ, ಹೆಚ್‍ಎಎಲ್‍ಗೆ ನೀಡುವ ಬದಲು 30 ಸಾವಿರ ಕೋಟಿ ರೂ. ಅಂಬಾನಿಯವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು.

ಯುವಕರು ಮೋದಿ ಏನು ಮಾಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು, 15 ಲಕ್ಷ ಅಕೌಂಟ್‍ಗೆ ಹಾಕುತ್ತೇನೆ ಎಂದು ಹೇಳಿದ್ರು, ಎಲ್ಲಿ ಹೋಯ್ತು ಆ ಹಣ?
ನಮ್ಮ ಸರ್ಕಾರದಲ್ಲಿ 350 ರೂ ಇದ್ದ ಗ್ಯಾಸ್ ಇಂದು 950 ರೂ.ಆಗಿದೆ. ಇದೆಲ್ಲಾ ಅರ್ಥ ಮಾಡಿಕೊಂಡು ಕಾಂಗ್ರೆಸ್‍ಗೆ ಮತ ಹಾಕಬೇಕು ಎಂದು ಹೇಳಿದರು
ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ ಎಲ್ಲರಿಗೂ ಸಮನಾದ ಅವಕಾಶ ಇದೆ.ಆದರೆ ಇದನ್ನೇ ಚೇಂಜ್ ಮಾಡಲು ಹೊರಟಿದ್ದಾರೆ.

ಇವರಿಗೆ ಚುನಾವಣೆ ಬಂದಾಗ ಶ್ರೀರಾಮ ನೆನಪಿಗೆ ಬರುತ್ತಾನೆ, ಆದರೂ ರಾಮಮಂದಿರ ಕಟ್ಟಿದ್ರಾ ಎಂದು ಪ್ರಶ್ನಿಸಿದರು.

ಸಬರ್ಬನ್ ರೈಲು ತರುತ್ತೇನೆ ಎಂದು ಹಲವು ವರ್ಷಗಳಿಂದ ಹೇಳಿಕೊಂಡೇ ಬರುತ್ತಿದ್ದಾರೆ.ಎಲ್ಲಿ ಸಬರ್ಬನ್?

7300 ಕೋಟಿ ರೂ.ಗಳನ್ನು ಬೆಂಗಳೂರಿನ ಅಭಿವೃದ್ಧಿಗೆ ನೀಡಿದ್ದೇನೆ ಯಾರಾದ್ರೂ ನೀಡಿದ್ದಾರ.ಎಂದು ಪ್ರಶ್ನಿಸಿದರು.

ಹಸಿರು ಕ್ರಾಂತಿ ಹರಿಕಾರ:
ದೇಶದಲ್ಲಿ ಹಸಿರು ಕ್ರಾಂತಿ ಮಾಡುವಲ್ಲಿ ಬಾಬು ಜಗಜೀವನ್‍ರಾಮ್ ಅವರ ಸಾಧನೆ ಅಪಾರ.ಇಂದಿರಾಗಾಂಧಿ ಅವರ ಸರ್ಕಾರದಲ್ಲಿ ಜಗಜೀವನ್‍ರಾಮ್ ಅವರು ಕೃಷಿ ಸಚಿವರಾಗಿದ್ದರು. ಆಹಾರದ ಸ್ವಾವಲಂಬನೆಯಾಗಿದ್ದರೆ ಅದು ಕಾಂಗ್ರೆಸ್‍ನಿಂದ.ದೇಶಕ್ಕೆ ಸ್ವತಂತ್ರ ಬಂದ ಮೇಲೆ ಹುಟ್ಟಿದ್ದು, ನರೇಂದ್ರ ಮೋದಿ.

1885 ನೇ ಇಸವಿಯಲ್ಲಿ ಕಾಂಗ್ರೆಸ್ ಸ್ಥಾಪನೆ 134 ವರ್ಷ ಆಯಿತು. ಬಿಜೆಪಿಯಲ್ಲಿ ದೇಶಕ್ಕೆ ಬಲಿದಾನ ಕೊಟ್ಟವರಲ್ಲಿ ಯಾರೂ ಇಲ್ಲ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಸದಾನಂದಗೌಡ ವಿರುದ್ಧ ವಾಗ್ದಾಳಿ:
ಅಭ್ಯರ್ಥಿ ಕೃಷ್ಣಬೈರೇಗೌಡ ಮಾತನಾಡಿ, ಕೆಆರ್‍ಪುರದಲ್ಲಿ ಅಭಿವೃದ್ಧಿಗೆ ಸ್ಥಳೀಯ ಸಂಸದರ ಸಾಧನೆ ಶೂನ್ಯ ಎಂದು ದೂರಿದರು.

ಮಾಜಿ ಮುಖ್ಯಮಂತ್ರಿಗಳು ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಬೆಂಗಳೂರು ಉತ್ತರಕ್ಕೆ ಅಭ್ಯರ್ಥಿಯಾಗಿ ನಿಂತುಕೊಂಡಿದ್ದೇನೆ.

ತುಮಕೂರು, ಹೊಸೂರು ರಸ್ತೆ, ಮೈಸೂರು ರಸ್ತೆ ಪ್ಲೈಓವರ್ ಮಾಡಿಸಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ. ಸ್ಥಳೀಯ ಸಂಸದರು ಕೆಆರ್‍ಪುರದಿಂದ ಹೊಸಕೋಟೆ ಟೋಲ್‍ವರೆಗೆ ಪ್ಲೈಓವರ್ ಕಟ್ಟಬೇಕು ಎಂಬ ಸಲಹೆಯನ್ನಾದರೂ ಕೇಂದ್ರಕ್ಕೆ ತಿಳಿಸಿದ್ದಾರ ಅದೂ ಇಲ್ಲ. ಈ ಕ್ಷೇತ್ರದ ಬಗ್ಗೆ ಸದಾನಂದಗೌಡರಿಗೆ ಆಸಕ್ತಿ ಇಲ್ಲ ಎಂದು ಕಿಡಿಕಾರಿದರು.

ಸ್ಥಳೀಯ ಜನರ ಸಮಸ್ಯೆಗಳನ್ನು ಆಲಿಸದಿದ್ದರೆ ಮತ ಯಾಕೆ ಕೇಳಲು ಬರುತ್ತೀರ, ಪಕ್ಕದಲ್ಲಿ ಮೋದಿ ಮುಖವಾಡ ಹಾಕಿ ಅವರ ಹೆಸರಲ್ಲಿ ಮತ ಕೇಳುವ ಸಂಸದರು ನಿಮಗೆ ಬೇಕೇ ಎಂದು ಕೇಳಿದರು.

ಎಂಪಿ ಯಾರು ಎಂಬುದೇ ಇಲ್ಲಿನ ಜನರಿಗೆ ಗೊತ್ತಿಲ್ಲ, ಕಳೆದ 15 ವರ್ಷದಿಂದ ಕೆಆರ್‍ಪುರದ ಜನರೊಂದಿಗೆ ಒಡನಾಟ ಇಟ್ಟುಕೊಂಡಿದ್ದೇನೆ. ಬೈರತಿ ಬಸವರಾಜರವರ ಶಕ್ತಿ ಏನೆಂಬುದು ಇಲ್ಲಿ ಸೇರಿರುವ ಜನಸ್ತೋಮವೇ ಸಾಕ್ಷಿ ಎಂದರು.

ಶಾಸಕರಾದ ಬೈರತಿ ಬಸವರಾಜ, ಎಸ್.ಟಿ.ಸೋಮಶೇಖರ್, ರಾಜ್ಯ ಸಭಾ ಸದಸ್ಯ ಕೆ.ಸಿ.ರಾಮಮೂರ್ತಿ, ಮಾಜಿ ಶಾಸಕ ಐವಾನ್ ಇಗ್ಲಿ, ಬ್ಲಾಕ್ ಅಧ್ಯಕ್ಷರಾದ ಮಮುನೇಗೌಡ, ಮನೋಜ್, ಪಾಲಿಕೆ ಸದಸ್ಯರಾದ ಶ್ರೀಕಾಂತ್, ಜಯಪ್ರಕಾಶ್, ಎಸ್.ಜಿ.ನಾಗರಾಜ್, ರಾಧಮ್ಮ ವೆಂಕಟೇಶ್, ಆಂತೋಣಿಸ್ವಾಮಿ, ಮುಖಂಡರಾದ ಡಿ.ಕೆ.ಮೋಹನ್‍ಬಾಬು, ಶಿವಪ್ಪ, ಪಟಾಕಿ ರವಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ