ಬೆಂಗಳೂರು,ಏ.5- ಧಾರವಾಡದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು 19 ಮಂದಿ ಸಾವನ್ನಪ್ಪಿದ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್ ಕುಸಿದು ಇಬ್ಬರು ಕೂಲಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 4.30ರ ಸುಮಾರಿಗೆ ಯಶವಂತಪುರದ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿಗಳನ್ನು ಬಿಹಾರ ಮೂಲದ ರಾಕೇಶ್ ಹಾಗೂ ಪಶ್ಚಿಮ ಬಂಗಾಳದ ರಾಹುಲ್ ಎಂದು ಗುರುತಿಸಲಾಗಿದೆ.
ಘಟನೆಯಲ್ಲಿ 12 ಮಂದಿಗೆ ಗಂಭೀರ ಗಾಯಗಳಾಗಿದ್ದು, ಕೆ.ಸಿ.ಜನರಲ್ ಹಾಗೂ ಸ್ಥಳೀಯ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಬಹುತೇಕ ಬಿಹಾರ, ಯಾದಗಿರಿ, ಪಶ್ಚಿಮಬಂಗಾಳ ಮೂಲದ ಕಾರ್ಮಿಕರೇ ತೊಡಗಿದ್ದರು ಎನ್ನಲಾಗಿದೆ.
ಎಪಿಎಂಸಿಯಿಂದ ಕಾರು ಪಾರ್ಕಿಂಗ್‍ಗಾಗಿ (ಎಂಎಲ್‍ಸಿಪಿ) ಎರಡನೆ ಮಹಡಿಯಲ್ಲಿ ಸ್ಲ್ಯಾಬ್ ಮತ್ತು ಸಜ್ಜಾ ನಿರ್ಮಾಣ ಕಾಮಗಾರಿ ನಡೆಯುತ್ತಿತ್ತು. ಮಣ್ಣಿನ ಮೇಲೆ ಸೆಂಟ್ರಿಂಗ್ ಅಳವಡಿಸಲಾಗಿತ್ತು.ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದರು.ಈ ವೇಳೆ ಸೆಂಟ್ರಿಂಗ್ ತಳಭಾಗದ ಮಣ್ಣು ಕುಸಿದು ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸ್ ಆಯುಕ್ತ ಸುನೀಲ್ ಕುಮಾರ್,ಡಿಸಿಪಿ ಶಶಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಂಜಿನಿಯರ್‍ನನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಆರ್‍ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.