ಬೆಂಗಳೂರು,ಏ.5- ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದ ಗುತ್ತಿಗೆದಾರರು ಮತ್ತು ಇಂಜಿನಿಯರ್ಗೆ ಸೇರಿದ ಚಿನ್ನಾಭರಣ ಮತ್ತು ನಗದಿಗೆ ಲೆಕ್ಕ ನೀಡಲು ವಿಫಲರಾದ ಹಿನ್ನೆಲೆಯಲ್ಲಿ ಅವುಗಳನ್ನು ಜಪ್ತಿ ಮಾಡಲಾಗಿದೆ.
2.1 ಕೋಟಿ ನಗದು ಹಾಗೂ 1.59 ಕೋಟಿ ಮೌಲ್ಯದ ಚಿನ್ನಾಭರಣವನ್ನು ಗುತ್ತಿಗೆದಾರರು ಮತ್ತು ಎಂಜಿನಿಯರ್ಗಳಿಂದ ದಾಳಿ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗಿತ್ತು.
ಬ್ಯಾಂಕ್ನಲ್ಲಿ ಡ್ರಾ ಮಾಡಿಕೊಂಡಿರುವ ನಗದು ಹಾಗೂ ಖರೀದಿ ಮಾಡಿರುವ ಚಿನ್ನಾಭರಣಕ್ಕೆ ಸೂಕ್ತ ದಾಖಲೆಗಳನ್ನುನೀಡುವಂತೆ ತನಿಖಾಧಿಕಾರಿಗಳು ನೋಟಿಸ್ ನೀಡಿದ್ದರು.ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಸೂಕ್ತ ದಾಖಲೆಗಳನ್ನು ನೀಡುವಲ್ಲಿ ವಿಫಲರಾದ ಕಾರಣ ಐಟಿ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಪೂರ್ಣಗೊಳ್ಳದ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ ಮಾಡಿತ್ತು.ಗುತ್ತಿಗೆದಾರರೊಬ್ಬರನ್ನು ಈ ಬಗ್ಗೆ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಇದಕ್ಕೆ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದರು.ಆದರೆ ಇದಕ್ಕೆ ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ.
ಕಳೆದ 23ರಂದು ಮೈಸೂರು, ಮಂಡ್ಯ, ಹಾಸನ, ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.ಇದು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಭಾರೀ ಮಾತಿನ ಚಕಮಕಿ ನಡೆದಿತ್ತು. ಐಟಿ ಅಧಿಕಾರಿಗಳ ದಾಳಿಯನ್ನು ಖಂಡಿಸಿ ದೋಸ್ತಿ ಪಕ್ಷಗಳ ಮುಖಂಡರು ಐಟಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದರು.