ಒಂದು ದಿನ ಮುಂದಕ್ಕೆ ಹೋದ ಪ್ರಧಾನಿ ಮೋದಿ ರಾಜ್ಯ ಪ್ರವಾಸ

ಬೆಂಗಳೂರು,ಏ.5-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸ ಒಂದು ದಿನದ ಮಟ್ಟಿಗೆ ಮುಂದೂಡಿಕೆಯಾಗಿದೆ.

ಈ ಮೊದಲು ನರೇಂದ್ರ ಮೋದಿ ಅವರು 8ರಂದು(ಸೋಮವಾರ) ಸಾಂಸ್ಕøತಿಕ ನಗರಿ ಮೈಸೂರು ಮತ್ತು ಕೋಟೆನಾಡು ಚಿತ್ರದುರ್ಗದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಬೇಕಿತ್ತು.

ಆದರೆ ಯುಗಾದಿ ಹಬ್ಬದ ಸಂದರ್ಭದಲ್ಲಿ ಜನರು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿರುವುದು ಹಾಗೂ ಹಬ್ಬದ ಮರುದಿನವೇ ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೋ ಇಲ್ಲವೋ ಎಂಬ ಕಾರಣಕ್ಕಾಗಿ ಮುಂದೂಡಲಾಗಿದೆ.

ಮಂಗಳವಾರದಂದು ಬೆಳಗ್ಗೆ ಮೈಸೂರಿನಲ್ಲಿ ಹಾಗೂ ಸಂಜೆ ಚಿತ್ರದುರ್ಗದಲ್ಲಿ ನರೇಂದ್ರ ಮೋದಿ ಅವರು ಬಿಜೆಪಿ ಪರ ಮತಯಾಚನೆ ಮಾಡಲಿದ್ದಾರೆ. ಶನಿವಾರ ಮತ್ತು ಭಾನುವಾರ ಯುಗಾದಿ ಹಬ್ಬ ಇರುವ ಕಾರಣ ಸಾಮಾನ್ಯವಾಗಿ ಇಂಥ ಸಮಯದಲ್ಲಿ ಜನರು ಮನೆಯಿಂದ ಆಚೆ ಬರಲು ಮೀನಾಮೇಷ ಎಣಿಸುತ್ತಾರೆ.

ಅಲ್ಲದೆ ಯುಗಾದಿ ಇರುವ ಕಾರಣ ನಿಗದಿತ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರೆತರುವುದು ಮುಖಂಡರಿಗೂ ಕೂಡ ಕಷ್ಟವಾಗಲಿದೆ. ಜೊತೆಗೆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ಕೈಗೊಳ್ಳುವುದು ಸಹ ಅಷ್ಟೇ ತ್ರಾಸಕರ. ಇದೆಲ್ಲವನ್ನೂ ಪರಿಗಣಿಸಿ ಸೋಮವಾರದ ಬದಲು ಮಂಗಳವಾರ ಮೋದಿ ಮತ ಪ್ರಚಾರ ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಮಂಗಳೂರು, ಚಿಕ್ಕೋಡಿ, ಬೆಂಗಳೂರು, ಗಂಗಾವತಿ ಸೇರಿದಂತೆ ಒಟ್ಟು 8 ಕಡೆ ನರೇಂದ್ರ ಮೋದಿಯವರು ಅಭ್ಯರ್ಥಿಗಳ ಪರ ಮತಯಾಚನೆ ಮಾಡುವರು.

ಬಿಜೆಪಿ ಬಹುತೇಕ ನರೇಂದ್ರ ಮೋದಿ ಅವರ ವರ್ಚಸ್ಸನ್ನೇ ಬಲವಾಗಿ ನಂಬಿಕೊಂಡಿದೆ. ಹೀಗಾಗಿ ರಾಜ್ಯದಲ್ಲಿ ಅವರು ಹೆಚ್ಚು ಹೆಚ್ಚು ಪ್ರಚಾರದಲ್ಲಿ ಪಾಲ್ಗೊಳ್ಳುವುದರಿಂದ ಪಕ್ಷಕ್ಕೆ ಆನೆ ಬಲ ಬರಲಿದೆ ಎಂಬುದು ರಾಜ್ಯ ನಾಯಕರ ವಿಶ್ವಾಸವಾಗಿದೆ.

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ರಾಜ್ಯದ ನಾನಾ ಕಡೆ ಭರ್ಜರಿ ಪ್ರಚಾರ ನಡೆಸಿದ್ದರು.ಪರಿಣಾಮ ಬಿಜೆಪಿ ರಾಜ್ಯದಲ್ಲಿ 104 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿತ್ತು. ಕರ್ನಾಟಕದ ಜನತೆ ಮೋದಿ ಅವರ ಮೋಡಿಗೆ ಮತ ನೀಡುತ್ತಾರೆ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ.

ಹೀಗಾಗಿಯೇ ರಾಜ್ಯದಲ್ಲಿ ಮೋದಿ ಹೆಚ್ಚು ಹೆಚ್ಚು ರ್ಯಾಲಿಗಳನ್ನು ನಡೆಸಬೇಕೆಂಬ ಬೇಡಿಕೆಯನ್ನು ಇಡಲಾಗಿತ್ತು. ಆದರೆ ಎಲ್ಲೆಡೆ ಅವರೇ ಹೆಚ್ಚಿನ ಪ್ರಚಾರ ನಡೆಸಬೇಕಾಗಿರುವುದರಿಂದ ಕರ್ನಾಟಕಕ್ಕೆ ಸೀಮಿತ ಸಂಖ್ಯೆಯ ರ್ಯಾಲಿ ನಡೆಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ