ಟಿಕ್​ಟಾಕ್​ ಆ್ಯಪ್ ನಿಷೇಧಕ್ಕೆ ಕೇಂದ್ರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ

ಚೆನ್ನೈ: ಚೀನಾ ಮೂಲದ ಟಿಕ್​ಟಾಕ್​ ಆ್ಯಪ್ ಅನ್ನು ನಿಷೇಧಿಸುವಂತೆ ಮದ್ರಾಸ್​ ಹೈಕೋರ್ಟ್​ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ವಿಡಿಯೋ ಆ್ಯಪ್​ ಅಶ್ಲೀಲತೆಗೆ ಪ್ರಚೋದನೆ ನೀಡುತ್ತಿದ್ದು, ಮಕ್ಕಳ ಮನಃಸ್ಥಿತಿಯನ್ನು ಹಾಳು ಮಾಡುತ್ತಿದೆ ಎಂದು ಮದ್ರಾಸ್​ ​ ಹೈಕೋರ್ಟ್​ನ ಮಧುರೈ ಪೀಠ ಅಭಿಪ್ರಾಯಪಟ್ಟಿದೆ.

ಟಿಕ್​ಟಾಕ್​ ಆ್ಯಪ್​ನಲ್ಲಿ ಯುವಜನರು ಡ್ಯುಯೆಟ್​ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರಲ್ಲಿ ನಮ್ಮೊಂದಿಗೆ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ವ್ಯಕ್ತಿ ಯಾರೆಂಬುದೇ ನಮಗೆ ತಿಳಿದಿರುವುದಿಲ್ಲ. ಈ ಆ್ಯಪ್​ ಬಳಕೆ ಮಾಡುವ ಮಕ್ಕಳು ಲೈಂಗಿಕ ಆಕ್ರಮಣಕಾರರ ದಾಳಿಗೆ ತುತ್ತಾಗುವ ಸಾಧ್ಯತೆಯೂ ಇದೆ. ಈ ಆ್ಯಪ್​ ಬಳಕೆ ಮಾಡುವ ಬಹುತೇಕರಿಗೆ ಇದರ ದುಷ್ಪರಿಣಾಮಗಳ ಕುರಿತು ಅರಿವಿರುವುದಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ಮಧುರೈ ಮೂಲದ ಹಿರಿಯ ನ್ಯಾಯವಾದಿ ಮುತ್ತು ಕುಮಾರ್​ ಅವರು ಟಿಕ್​ಟಾಕ್​ ಆ್ಯಪ್​ ನಿಷೇಧಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಈ ಆ್ಯಪ್​ ಅಶ್ಲೀಲ ವಿಡಿಯೋಗಳು, ಸಂಸ್ಕೃತಿ ನಾಶ, ಮಕ್ಕಳ ಮೇಲಿನ ದೌರ್ಜನ್ಯ, ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಹಾಗಾಗಿ ಈ ಆ್ಯಪ್​ ಅನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಕುಮಾರ್​ ಅವರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್​. ಕಿರುಬಾಕರನ್​ ಮತ್ತು ಎಸ್​ಎಸ್​ ಸುಂದರ್​ ಅವರಿದ್ದ ಪೀಠ ಆ್ಯಪ್​ ನಿಷೇಧಿಸುವ ಕುರಿತು ಹಾಗೂ ಅಮೆರಿಕದಲ್ಲಿರುವಂತೆ ಚಿಲ್ದ್ರನ್ಸ್​ ಆನ್​ಲೈನ್​ ಪ್ರೈವಸಿ ಪ್ರೊಟೆಕ್ಷನ್​ ಆಕ್ಟ್​ ನಂತೆ ಕಾಯ್ದೆ ರೂಪಿಸಬಹುದೇ ಎಂಬ ಕುರಿತು ಏಪ್ರಿಲ್​ 16ರೊಳಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

Madras High Court directs Centre to prohibit Tik Tok download

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ