ಯುಗಾದಿ ಹಬ್ಬದ ಹಿನ್ನಲೆ ಕೆಎಸ್‍ಆರ್‍ಟಿಸಿಯಿಂದ ವಿಶೇಷ ಬಸ್ ಸೇವೆ

ಬೆಂಗಳೂರು,ಏ.4- ಯುಗಾದಿ ಹಬ್ಬದ ಪ್ರಯುಕ್ತ ಕೆಎಸ್‍ಆರ್‍ಟಿಸಿಯಿಂದ ಹೆಚ್ಚುವರಿಯಾಗಿ 600 ವಿಶೇಷ ಬಸ್‍ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷ ಬಸ್ ಸೇವೆ ನಾಳೆಯಿಂದ ಆರಂಭವಾಗಲಿದ್ದು, ಮೂರು ದಿನಗಳ ಕಾಲವೂ ದೊರೆಯಲಿದೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಏ.5ರಿಂದ 7ರವರೆಗೂ ಹೆಚ್ಚುವರಿ ಬಸ್ ಸೇವೆ ಒದಗಿಸಲಾಗುವುದು ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗೀರ್, ಬೀದರ್, ತಿರುಪತಿ ಮುಂತಾದ ಸ್ಥಳಗಳಿಗೆ ವಿಶೇಷ ಬಸ್‍ಸೌಲಭ್ಯ ಒದಗಿಸಲಾಗಿದೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಮಾರ್ಗದ ಕಡೆ ಹೆಚ್ಚುವರಿ ಬಸ್ ಸೌಲಭ್ಯವಿರುತ್ತದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶ/ತೆಲಂಗಾಣದ ಮಧುರೈ, ಕುಂಭಕೋಣಂ, ತಿರುಚಿ, ಚೆನ್ನೈ, ಕೊಯಮತ್ತೂರ್, ತಿರುಪತಿ, ವಿಜಯವಾಡ, ಹೈದರಾಬಾದ್ ಮುಂತಾದ ಹೊರಾಜ್ಯದ ಸ್ಥಳಗಳಿಗೆ ವಿಶೇಷ ಬಸ್ ಸೇವೆಯನ್ನು ಶಾಂತಿನಗರದಲ್ಲಿನ ಬೆಂಗಳೂರು ಕೇಂದ್ರ ಘಟಕ-4 ಮತ್ತು ಘಟಕ-2ರ ಮುಂಭಾಗದಿಂದ ವಿಶೇಷ ವ್ಯವಸ್ಥೆ ಮಾಡಲಾಗುವುದು.

ಬೆಂಗಳೂರು ನಗರದ ಬಸವೇಶ್ವರ ಬಸ್ ನಿಲ್ದಾಣ, ವಿಜಯನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್(ರಾಜಾಜಿನಗರ), ಮಲ್ಲೇಶ್ವರಂ 18ನೇ ಅಡ್ಡರಸ್ತೆ, ಬನಶಂಕರಿ, ಜೀವನ್ ಭೀಮಾನಗರ, ಐಟಿಐ ಗೇಟ್, ಗಂಗಾನಗರ, ಕೆಂಗೇರಿ ಉಪನಗರ ಮುಂತಾದ ಸ್ಥಳಗಳಿಂದ ಪ್ರಯಾಣಿಕರ ಒತ್ತಡಕ್ಕನುಗುಣವಾಗಿ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೇಸುಬ್ರಮಣ್ಯ, ಧರ್ಮಸ್ಥಳ ಮುಂತಾದ ಮಾರ್ಗಗಳಿಗೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚುವರಿ ಸಾರಿಗೆಗಳಿಗೆ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸುವ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಪ್ರಯಾಣಿಕರು ಬಸ್ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಕಾಯ್ದಿರಿಸಲಾಗಿರುವ ಟಿಕೇಟ್‍ಗಳ ಮೇಲೆ ನಮೂದಿಸಲಾಗಿರುವ ಬಸ್ ನಿಲ್ದಾಣ/ಪಿಕ್ ಅಪ್ ಪಾಯಿಂಟ್‍ನ ಹೆಸರನ್ನು ಗಮನಿಸುವಂತೆ ಕೋರಲಾಗಿದೆ.

ಸಾರ್ವಜನಿಕ ಪ್ರಯಾಣಿಕರು ಕರ್ನಾಟಕ ಹಾಗೂ ಅಂತಾರಾಜ್ಯದಲ್ಲಿ ಇರುವ 706 ಗಣಕೀಕೃತ ಬುಕಿಂಗ್ ಕೌಂಟರ್‍ಗಳ ಮೂಲಕ ಮುಂಗಡವಾಗಿ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೇಟ್‍ಕಾಯ್ದಿರಿಸಿದಲ್ಲಿ ಶೇ.5ರಷ್ಟು ರಿಯಾಯ್ತಿ ನೀಡುವುದಾಗಿ ಕೆಎಸ್‍ಆರ್‍ಟಿಸಿ ತಿಳಿಸಿದೆ.ಅಲ್ಲದೆ ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟ್‍ನ್ನು ಒಟ್ಟಿಗೆ ಕಾಯ್ದಿರಿಸಿದಾಗ ಬರುವ ಪ್ರಯಾಣ ದರದಲ್ಲಿ ಶೇ.10ರಷ್ಟು ರಿಯಾಯ್ತಿ ನೀಡಲಾಗುವುದು.

ಇದಲ್ಲದೆ ಎಲ್ಲಾ ತಾಲ್ಲೂಕು ಮತ್ತು ಜಿಲ್ಲಾ ಬಸ್ ನಿಲ್ದಾಣಗಳಿಂದ ಸಂಚಾರ ಒತ್ತಡಕ್ಕನುಗುಣವಾಗಿ ವಿಶೇಷ ಬಸ್‍ಗಳ ಸೇವೆ ಕಲ್ಪಿಸಲಾಗುತ್ತದೆ ಎಂದು ಕೆಎಸ್‍ಆರ್‍ಟಿಸಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ