ಯುಎಇ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ಗೆ ಪಾತ್ರರಾದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಸಂಯುಕ್ತ ಅರಬ್‌ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಝಾಯೆದ್ ಮೆಡಲ್’ ಗೌರವಕ್ಕೆ ಪಾತ್ರರಾಗಿದ್ದಾರೆ.

ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ನರೇಂದ್ರ ಮೋದಿಯವರ ಪ್ರಯತ್ನಕ್ಕಾಗಿ ಈ ಅತ್ಯುನ್ನನ ಪುರಸ್ಕಾರ ನೀಡಿರುವುದಾಗಿ ಯುಎಇ ಸರಕಾರ ತಿಳಿಸಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಯುಎಇ ಅಧ್ಯಕ್ಷ ಶೇಖ್‌ ಖಲೀಫಾ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌, “ನಾವು ಭಾರತದೊಂದಿಗೆ ಐತಿಹಾಸಿಕ ಮತ್ತು ಸಮಗ್ರವಾದ ಕಾರ್ಯತಂತ್ರದ ಸಂಬಂಧಗಳನ್ನು ಹೊಂದಿದ್ದೇವೆ. ನಮ್ಮ ಆತ್ಮೀಯ ಗೆಳೆಯರಾದ ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ನಡುವಿನ ಸಂಬಂಧಗಳನ್ನು ವೃದ್ಧಿಸುವಲ್ಲಿ ಗಮನಾರ್ಹ ಪಾತ್ರ ವಹಿಸಿದ್ದಾರೆ. ಅವರ ಈ ಪ್ರಯತ್ನಕ್ಕಾಗಿ ಯುಎಇ ಅಧ್ಯಕ್ಷರು ಝಾಯೆದ್ ಮೆಡಲ್ ನೀಡಿ ಗೌರವಿಸುತ್ತಿದ್ದಾರೆ” ಎಂದಿದ್ದಾರೆ.

ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಮತ್ತು ಯುಕೆ ರಾಣಿ ಎಜಿಜಬೆತ್ 2 ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.

2015ರಲ್ಲಿ ಮೋದಿ ಅವರು ಯುಎಇಗೆ ಭೇಟಿ ನೀಡಿದ ಬಳಿಕ ಎರಡೂ ದೇಶಗಳ ನಡುವೆ ಸಂಬಂಧ ವೃದ್ಧಿಗೊಂಡಿತ್ತು. 2017ರಲ್ಲಿ ಗಣರಾಜ್ಯೋತ್ಸವ ಪರೇಡ್ ಮುಖ್ಯ ಅತಿಥಿಯಾಗಿ ಯುಎಇ ಯುವರಾಜ ಭೇಟಿ ನೀಡಿದ್ದರು. ಮೋದಿ ಎರಡು ಸಲ ಭೇಟಿ ನೀಡಿರುವ ದೇಶಗಳಲ್ಲಿ ಯುಎಇ ದೇಶ ಸಹ ಒಂದಾಗಿದೆ.

ನರೇಂದ್ರ ಮೋದಿಯವರು ಕಳೆದ ವರ್ಷ ಫೆಬ್ರವರಿಯಲ್ಲಿ ಯುಎಇಗೆ ಭೇಟಿ ನೀಡಿದ್ದರು. ಭಾರತ ಮತ್ತು ಅರಬ್​ ಸಂಯುಕ್ತ ಸಂಸ್ಥಾನದ ವಾಣಿಜ್ಯಾತ್ಮಕ ಸಂಬಂಧ ಈಗ ಬಲಗೊಂಡಿದೆ. ಪರಸ್ಪರ ರಾಷ್ಟ್ರಗಳು ವ್ಯಾಪಾರದಲ್ಲಿ ಬಂಡವಾಳ ಹೂಡಿದ್ದು ಉದ್ಯಮ ಬಲಗೊಳ್ಳುತ್ತಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಝಾಯದ್ ಪ್ರಶಸ್ತಿಗೆ ಭಾಜನರಾದ ಮೋದಿಯವರಿಗೆ ಕೇಂದ್ರ ಸಚಿವರಾದ ರವಿಶಂಕರ್​ ಪ್ರಸಾದ್, ಸುಷ್ಮಾ ಸ್ವರಾಜ್​ ಮೊದಲಾದವರು ಶುಭ ಹಾರೈಸಿದ್ದಾರೆ.

PM Modi Conferred With Zayed Medal, UAE’s Top Civil Honour

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ