ಮೈತ್ರಿ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್‍ರವರಿಂದ ಹಲವೆಡೆ ಪಾದಯಾತ್ರೆ

ಬೆಂಗಳೂರು, ಏ.4- ಇಲ್ಲಿನ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಕೆ.ಹರಿಪ್ರಸಾದ್ ಇಂದು ಗೋವಿಂದರಾಜನಗರ, ವಿಜಯನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಮತಪ್ರಚಾರ ನಡೆಸಿದರು.

ಗೋವಿಂದರಾಜನಗರದ ಎಸ್‍ಎಚ್‍ಕೆ ಕಲ್ಯಾಣ ಮಂಟಪದಲ್ಲಿಂದು ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ಜಂಟಿ ಸಭೆ ನಡೆಸಿದರು.

ವಿಜಯನಗರದ ಪಟ್ಟೆಗಾರ ಪಾಳ್ಯ, ಅತ್ತಿಗುಪ್ಪೆಯ ಪಟೇಲ್ ಅಪ್ಪಣ್ಣಯ್ಯ ಕಲ್ಯಾಣ ಮಂಟಪದಲ್ಲಿ ಸಭೆ ನಡೆಸಿ ಪಕ್ಷದ ಮುಖಂಡರು ಮತ್ತು ಪದಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವಿ ಮಾಡಿದರು.

ಎಂ.ಕೃಷ್ಣಪ್ಪ, ಪ್ರಿಯ ಕೃಷ್ಣ, ಶರವಣ, ಆರ್.ಪ್ರಕಾಶ್, ಮಾಜಿ ಮೇಯರ್ ರಾಮಚಂದ್ರಪ್ಪ, ಮಾಜಿ ಉಪಮೇಯರ್ ಪುಟ್ಟರಾಜು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಕೃಷ್ಣಪ್ಪ, ಪಾಲಿಕೆ ಮಾಜಿ ಸದಸ್ಯ ಜಯರಾಂ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗೋವಿಂದರಾಜನಗರ, ವಿಜಯನಗರದ ಹಲವೆಡೆ ತಮ್ಮ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ ಮತದಾನ ಮಾಡುವಂತೆ ಮನವಿ ಮಾಡಿದರು.

ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುತ್ತಿರುವುದರಿಂದ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಈ ಬಾರಿ ನಮ್ಮ ಗೆಲುವು ಸುಲಭವಾಗುತ್ತದೆ ಎಂಬ ಅಭಿಪ್ರಾಯವನ್ನು ಹರಿಪ್ರಸಾದ್ ವ್ಯಕ್ತಪಡಿಸಿದರು.

ಇದಲ್ಲದೆ, ಸಜ್ಜನ್‍ರಾವ್ ವೃತ್ತ, ವಿವಿ ಪುರಂನ ವಾಸವಿ ಸಭಾಂಗಣ, ವೈಶ್ಯ ಸಮುದಾಯದ ಮುಖಂಡರ ಜತೆ ಅವರು ಸಭೆ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ