ರಾಜ್ಯದಲ್ಲಿ 22 ಸ್ಥಾನಗಳನ್ನು ಗೆಲ್ಲಲು ಬಿಜೆಪಿಯಿಂದ ರಣತಂತ್ರ

ಬೆಂಗಳೂರು, ಏ.4- ಲೋಕಸಭೆ ಚುನಾವಣೆಯಲ್ಲಿ 22 ಸ್ಥಾನಗಳನ್ನು ಗೆದ್ದು ಮೈತ್ರಿ ಸರ್ಕಾರಕ್ಕೆ ಖೆಡ್ಡಾ ತೋಡಲು ಮುಂದಾಗಿರುವ ಬಿಜೆಪಿ ಕೆಲವು ಕ್ಷೇತ್ರಗಳಿಗೆ ವಿಶೇಷ ಒತ್ತು ಕೊಟ್ಟಿದೆ.

ಚಿಕ್ಕಬಳ್ಳಾಪುರ, ಚಿಕ್ಕೋಡಿ, ಚಾಮರಾಜನಗರ, ಬೆಂಗಳೂರು ದಕ್ಷಿಣ, ಬಳ್ಳಾರಿ, ಕೊಪ್ಪಳ, ಬೀದರ್ ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಕಮಲ ಅರಳಿಸಲು ವಿಶೇಷ ರಣತಂತ್ರ ರೂಪಿಸಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ 17 ಲೋಕಸಭಾ ಕ್ಷೇತ್ರಗಳ ಪೈಕಿ ಬಳ್ಳಾರಿ ಉಪಚುನಾವಣೆಯಲ್ಲಿನ ಸೋಲು ಹಾಗೂ ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ಅನಂತ್‍ಕುಮಾರ್ ನಿಧನ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿಯಿಂದಾಗಿ ಕೆಲವು ಕ್ಷೇತ್ರಗಳಲ್ಲಿ ಕಠಿಣ ಕ್ರಮವನ್ನು ಎದುರಿಸಬೇಕಾದ ಪರಿಸ್ಥಿತಿ ಎದುರಾಗಿದೆ.

ಯಾವ ಯಾವ ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಪ್ರಬಲ ಪೈಪೋಟಿ ನೀಡಲಿದ್ದಾರೆ ಎಂಬುದನ್ನು ಪಟ್ಟಿಮಾಡಿಕೊಂಡಿರುವ ಆರ್‍ಎಸ್‍ಎಸ್ ಮತ್ತು ಬಿಜೆಪಿ ನಾಯಕರು ಇಂತಹ ಕಡೆ ಅಭ್ಯರ್ಥಿ ಗೆಲುವಿಗೆ ವಿಶೇಷ ಮುತುವರ್ಜಿ ವಹಿಸಲಿದ್ದಾರೆ.

ಸಂಘ ಪರಿವಾರದ ಬೆಂಬಲ, ಬಿಜೆಪಿ ಸಂಘಟನೆ ಮತ್ತು ಜತೆಗೆ ಒಂದಿಷ್ಟು ಪರಿಶ್ರಮ ಪಟ್ಟರೆ ಕಠಿಣ ಎನಿಸಿರುವ ಮೂರರಿಂದ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಅನಾಯಾಸವಾಗಿ ಗೆಲ್ಲಬಹುದು.ಹೀಗಾಗಿ ಇಂತಹ ಕ್ಷೇತ್ರಗಳನ್ನು ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಎಂದು ಲೆಕ್ಕ ಹಾಕಿ ಗೆಲುವಿಗೆ ತನ್ನದೇ ಆದ ರಣತಂತ್ರವನ್ನು ಬಿಜೆಪಿ ರೂಪಿಸುತ್ತಿದೆ.

ಬೆಂಗಳೂರು ದಕ್ಷಿಣ ಲೋಕಸಭೆ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದರಿಂದ ಪ್ರಾರಂಭದಲ್ಲಿ ಗೊಂದಲ ನಿರ್ಮಾಣವಾಗಿತ್ತು. ನಂತರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರೋಡ್ ಶೋ ನಡೆಸುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದರು ಆದರೂ ಆಂತರಿಕ ಭಿನ್ನಮತ ಈಗಲೂ ಕುದಿಯುತ್ತಿದೆ.

ಇದನ್ನು ನಿವಾರಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸಿ ಬೆಂಗಳೂರು ದಕ್ಷಿಣ ಲೋಕಸಭೆ ವ್ಯಾಪ್ತಿಗೆ ಬರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶವನ್ನು ನಡೆಸಲು ಮುಂದಾಗಿದೆ. ಒಂದು ಬಾರಿ ಮೋದಿ ಅವರು ಪ್ರಚಾರ ನಡೆಸಿದರೆ ಭಿನ್ನಮತ ತನ್ನಿಂದ ತಾನೇ ಶಮನವಾಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿ ನಾಯಕರದ್ದು.

ಚಿಕ್ಕಬಳ್ಳಾಪುರ ಸಂಸದ ಎಂ.ವೀರಪ್ಪಮೊಯ್ಲಿ ಬಗ್ಗೆ ಕಾಂಗ್ರೆಸ್ -ಜೆಡಿಎಸ್ ನಾಯಕರು ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.ಐದು ವರ್ಷಗಳ ಅವಧಿಯಲ್ಲಿ ಅವರು ಸಂಸದರಾಗಿ ಕ್ಷೇತ್ರಕ್ಕೆ ಯಾವ ಕೆಲಸಗಳನ್ನು ಮಾಡಿಲ್ಲ ಎಂಬ ಆರೋಪ ಹೊತ್ತಿದ್ದಾರೆ.

ಇನ್ನು ಕಳೆದ ಲೋಕಸಭೆ ಚುನಾವಣೆಯಲ್ಲಿ ಕೆಲವೇ ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದ ಬಚ್ಚೇಗೌಡ ಬಗ್ಗೆ ಜನರಿಗೆ ಅನುಕುಂಪವಿದೆ.ಜತೆಗೆ ಇದು ನನ್ನ ಕೊನೆಯ ಚುನಾವಣೆ ಎಂದು ಬಚ್ಚೇಗೌಡ ಪ್ರಚಾರ ನಡೆಸುತ್ತಿದ್ದಾರೆ.

ಅನುಕಂಪ, ದೋಸ್ತಿ ಪಕ್ಷಗಳ ವಿರೋಧ ಇದರ ಜತೆಗೆ ಒಂದಿಷ್ಟು ಪ್ರಯತ್ನ ಪಟ್ಟರೆ ಗೆಲುವು ಪಡೆಯಬಹುದು ಎಂಬ ಲೆಕ್ಕಾಚಾರದಲ್ಲೇ ಬಿಜೆಪಿ ಕಾರ್ಯತಂತ್ರವನ್ನು ರೂಪಿಸಿದೆ.

ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕತ್ತಿ ಸಹೋದರರನ್ನು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ನವರೇ ಮಾತುಕತೆ ನಡೆಸುವ ಮೂಲಕ ಬಿಕ್ಕಟ್ಟು ಪರಿಹರಿಸಿದ್ದಾರೆ.

ಕಾಂಗ್ರೆಸ್‍ನಲ್ಲಿ ಇದ್ದುಕೊಂಡೇ ಪರೋಕ್ಷವಾಗಿ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಬಿಜೆಪಿಗೆ ಬೆಂಬಲ ನೀಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಅಲ್ಲದೆ, ಕಳೆದ ಬಾರಿ ಬಿಜೆಪಿ ಇಲ್ಲಿ ಕೇವಲ ಮೂರು ಸಾವಿರ ಮತಗಳ ಅಂತರದಿಂದ ಸೋತಿತ್ತು. ಕ್ಷೇತ್ರದಲ್ಲಿ ಸಂಘಟನೆ ಪ್ರಬಲವಾಗಿರುವುದು ಕಾಂಗ್ರೆಸ್‍ನ ಭಿನ್ನಮತ ಸದುಪಯೋಗಪಡಿಸಿಕೊಂಡರೆ ಚಿಕ್ಕೋಡಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬಹುದೆಂಬ ದೂರದೃಷ್ಟಿ ಬಿಜೆಪಿಯಲ್ಲಿದೆ.

ಕಳೆದ ಉಪ ಚುನಾವಣೆಯಲ್ಲಿ ಹೀನಾಯವಾಗಿ ಪರಾಭವಗೊಂಡಿದ್ದ ಗಣಿ ಜಿಲ್ಲೆ ಬಳ್ಳಾರಿಯನ್ನು ಬಿಜೆಪಿ ತನ್ನ ವಶಕ್ಕೆ ತೆಗೆದುಕೊಳ್ಳಲು ಭಾರೀ ರಣತಂತ್ರ ಹೆಣೆದಿದೆ.

ಶಾಸಕ ಆನಂದ್‍ಸಿಂಗ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಶಾಸಕ ಜೆ.ಎನ್.ಗಣೇಶ್, ಕಾಂಗ್ರೆಸ್‍ನಿಂದ ಅಂತರ ಕಾಯ್ದುಕೊಂಡಿರುವ ಬಿ.ನಾಗೇಂದ್ರ, ಆನಂದ್‍ಸಿಂಗ್ ಅನುಪಸ್ಥಿತಿ, ಜಿಲ್ಲಾ ಕಾಂಗ್ರೆಸ್ ನಾಯಕರ ಪರಸ್ಪರ ಕಾಲು ಎಳೆಯುವಿಕೆ ಸೇರಿದಂತೆ ಭಿನ್ನಮತವನ್ನೇ ಲಾಭ ಮಾಡಿಕೊಂಡು ಕೈತಪ್ಪಿರುವ ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಆರ್‍ಎಸ್‍ಎಸ್ ನಾಯಕರು ಖುದ್ದು ಅಖಾಡಕ್ಕಿಳಿದಿದ್ದಾರೆ.

ಸೋಲುವ ಭೀತಿ ಎದುರಿಸುತ್ತಿರುವ ಕೊಪ್ಪಳ ಮತ್ತು ಬೀದರ್‍ನಲ್ಲೂ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ವಿಶೇಷ ಗಮನ ಹರಿಸಿದೆ. ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಿಂದ ಅವರು ಐದು ಬಾರಿ ಸಂಸದರಾಗಿದ್ದರು.ದಲಿತ ಮತಗಳ ಮೇಲೆ ಅವರು ಸಾಕಷ್ಟು ಹಿಡಿತ ಹೊಂದಿರುವುದು ಜತೆಗೆ ಜಿಲ್ಲೆಯಲ್ಲಿ ಬಿಎಸ್‍ಪಿ ಸ್ಪರ್ಧೆಯಿಂದ ದಲಿತ ಮತಗಳು ವಿಭಜನೆಯಾದರೆ ವೀರಶೈವ ಮತಗಳನ್ನು ಒಗ್ಗೂಡಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಗಮನ ಹರಿಸಲಾಗಿದೆ.

ಸೋಲಿಲ್ಲದ ಸರದಾರನೆಂದೇ ಗುರುತಿಸಿಕೊಂಡಿರುವ ಕಾಂಗ್ರೆಸ್‍ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪರಾಭವಗೊಳಿಸಲು ಪಣತೊಟ್ಟಿರುವ ಬಿಜೆಪಿ ಈಗಾಗಲೇ ಭಾರೀ ರಣತಂತ್ರ ರೂಪಿಸಿದೆ. ಹೀಗೆ 22 ಕ್ಷೇತ್ರಗಳನ್ನು ಗುರಿಯಾಗಿಟ್ಟುಕೊಂಡು ಬಿಜೆಪಿ ರಣತಂತ್ರವನ್ನು ಹೆಣೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ