ಬೆಂಗಳೂರು, ಏ.3-ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆಯಾಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕೆಂಬ ಒಂದೇ ಕಾರಣಕ್ಕಾಗಿ ಕಾಂಗ್ರೆಸ್-ಜೆಡಿಎಸ್ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದರೂ ಸರ್ಕಾರವನ್ನು ರಚನೆ ಮಾಡಿಕೊಂಡಿವೆ. ಲೋಕಸಭೆ ಚುನಾವಣೆ ಫಲಿತಾಂಶ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ತೀರ್ಮಾನಿಸುವ ಚುನಾವಣೆಯಾಗಲಿದೆ ಎಂದು ಅವರು ಹೇಳಿದರು.
ಬೆಂಗಳೂರು ಪ್ರೆಸ್ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಎಸ್.ಎಂ.ಕೃಷ್ಣ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ನೇತೃತ್ವ ವಹಿಸಿರುವ ಎಚ್.ಡಿ.ಕುಮಾರಸ್ವಾಮಿಗೂ ಫಲಿತಾಂಶ ಅತ್ಯಂತ ಮಹತ್ವದ್ದಾಗಲಿದೆ. ಫಲಿತಾಂಶದಲ್ಲಿ ಏರುಪೇರಾದರೆ ಏನು ಬೇಕಾದರೂ ನಡೆಯಬಹುದು ಎಂದು ಭವಿಷ್ಯ ನುಡಿದರು.
10 ತಿಂಗಳ ಅವಧಿಯಲ್ಲಿ ದೋಸ್ತಿ ಸರ್ಕಾರದ ಆಡಳಿತ ವೈಖರಿ ರಾಜ್ಯದ ಜನತೆಗೆ ನಿರಾಸೆ ತಂದಿದೆ. ಕೇವಲ ಭರವಸೆಗಳು ಮತ್ತು ಯೋಜನೆಗಳು ಕಾಗದದ ಮೇಲೆ ಘೋಷಣೆಯಾಗಿವೆಯೇ ಹೊರತು ಅನುಷ್ಠಾನವಾಗಿಲ್ಲ. ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವಲ್ಲಿ ಎರಡೂ ಪಕ್ಷಗಳು ವಿಫಲವಾಗಿದೆ ಎಂದು ಅಭಿಪ್ರಾಯಪಟ್ಟರು.
ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ವಾಸ್ತವವಾಗಿ ಅನೇಕ ರೈತರಿಗೆ ಈ ಯೋಜನೆಯ ಲಾಭ ಸಿಕ್ಕಿಲ್ಲ. ಜನರು ಸಮ್ಮಿಶ್ರ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಜನತೆ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮ್ಮಿಶ್ರ ಸರ್ಕಾರದ ಆಡಳಿತ ವೈಖರಿ ಹೇಗಿದೆ ಎಂದರೆ ಕುರುಡನೊಬ್ಬ ಆನೆಯನ್ನು ಮುಟ್ಟಿ ಕುದುರೆ ಎಂದು ಹೇಳಿದಂತಿದೆ. ಅವರವರ ಭಾವಕ್ಕೆ ತಕ್ಕಂತೆ ಮಾತನಾಡುತ್ತಿದ್ದಾರೆ. ಆದರೆ ಸರ್ಕಾರ ಮಾತ್ರ ಬಹಳ ಪಾರದರ್ಶಕವಾಗಿದೆ ಎಂದು ಕೃಷ್ಣ ವ್ಯಂಗ್ಯವಾಡಿದರು.
ಮೋದಿ ನಾಯಕತ್ವಕ್ಕೆ ಮೆಚ್ಚುಗೆ:
ಇನ್ನು ತಮ್ಮ ಮಾತಿನುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಮುಕ್ತಕಂಠದಿಂದ ಹೊಗಳಿದ ಎಸ್.ಎಂ.ಕೃಷ್ಣ, ದೇಶಕ್ಕೆ ಈಗ ಮೋದಿಯಂತಹ ನಾಯಕತ್ವದ ಅಗತ್ಯವಿದೆ.ದಕ್ಷ ಹಾಗೂ ದೃಢ ನಾಯಕತ್ವವನ್ನು ಮತದಾರರು ಇಷ್ಟಪಡುತ್ತಾರೆ ಎಂದು ಹೇಳಿದರು.
ನೋಟು ಅಮಾನೀಕರಣ, ಪಾಕಿಸ್ತಾನದ ಮೇಲೆ ನಡೆಸಿದ ಸರ್ಜಿಕಲ್ ಸ್ಟ್ರೈಕ್, ಇತ್ತೀಚೆಗೆ ನಡೆದ ವೈಮಾನಿಕ ದಾಳಿ, ಭಯೋತ್ಪಾದಕರನ್ನು ಮಟ್ಟ ಹಾಕುವಲ್ಲಿ ಅವರು ತೆಗೆದುಕೊಳ್ಳುತ್ತಿರುವ ದೃಢ ನಿಲುವುಗಳು, ನೆರೆ ರಾಷ್ಟ್ರಗಳೊಂದಿಗೆ ನಡೆಸುತ್ತಿರುವ ರಾಜತಾಂತ್ರಿಕ ವ್ಯವಹಾರಗಳು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ವಿಚಾರಗಳು ನನಗೆ ಮೆಚ್ಚುಗೆಯಾದವು. ಯಾರೇ ಏನೇ ಹೇಳಲಿ ಕೇಂದ್ರದಲ್ಲಿ ಮತ್ತೆ ಮೋದಿ ನಾಯಕತ್ವ ಬರುವುದರಲ್ಲಿ ಯಾವುದೇ ಸಂಶಯವೂ ಇಲ್ಲ ಎಂದು ಭವಿಷ್ಯ ನುಡಿದರು.
ನಾನು ಮೊದಲಿನಿಂದಲೂ ವಂಶಪಾರಂಪರ್ಯ ರಾಜಕಾರಣವನ್ನು ವಿರೋಧಿಸುತ್ತಲೇ ಬಂದಿದ್ದೇನೆ. ರಾಜಕಾರಣದಲ್ಲಿ ವಂಶಪಾರಂಪರ್ಯ ಎಂದಿಗೂ ಇರಬಾರದು.
ಇದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಅವರ ಮೊಮ್ಮಕ್ಕಳಾದ ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿಗೂ ಅನ್ವಯವಾಗುತ್ತದೆ.
ಕಾಂಗ್ರೆಸ್ನಲ್ಲಿ ಅರ್ಹತೆ ಇಲ್ಲದವರು ಇಂದು ರಾಷ್ಟ್ರೀಯ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.ಕೇವಲ ಕುಟುಂಬದ ಹೆಸರು ಹೇಳಿಕೊಂಡು ಸಾಮಥ್ರ್ಯವಿಲ್ಲದಿದ್ದರೂ ಪಕ್ಷವನ್ನು ಮುನ್ನಡೆಸುವುದು ಎಷ್ಟರಮಟ್ಟಿಗೆ ಸರಿ.ನಾನು ಕಾಂಗ್ರೆಸ್ನಲ್ಲಿದ್ದಾಗಲೂ ಇದೇ ಮಾತನ್ನು ಹೇಳಿದ್ದೆ.ಈಗಲೂ ಅದಕ್ಕೆ ಬದ್ಧನಾಗಿದ್ದೇನೆ. ಅರ್ಹತೆ ಇದ್ದವರು ರಾಜಕಾರಣಕ್ಕೆ ಬಂದರೆ ನನ್ನದೇನೂ ಅಭ್ಯಂತರವಿಲ್ಲ. ಯಾರದೋ ಹೆಸರು ಹೇಳಿಕೊಂಡು ಬಂದರೆ ಒಪ್ಪುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿಗೆ ಟಾಂಗ್ ನೀಡಿದರು.
ಕಾಂಗ್ರೆಸ್ ಎಂಬುದು ಒಂದು ಕುಟುಂಬದ ಆಸ್ತಿಯಾಗಿದೆ.ಅರ್ಹತೆ ಇದ್ದರೇನು, ಬಿಟ್ಟರೇನು ಕುಟುಂಬದ ಹೆಸರೇಳಿಕೊಂಡು ವಂಶಪಾರಂಪರ್ಯ ರಾಜಕಾರಣ ಮುಂದುವರೆಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧವೂ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ಅವರು, 2006ರಲ್ಲಿ ಬಿಜೆಪಿ ಜೊತೆ ರಾತ್ರೋರಾತ್ರಿ ಸರ್ಕಾರ ರಚನೆ ಮಾಡಿದವರಿಗೆ ಏನು ಆತುರವಿತ್ತೋ ಗೊತ್ತಿಲ್ಲ. ಇಂಥವರು ನಮ್ಮ ಬಗ್ಗೆ ಮಾತನಾಡುತ್ತಾರೆ ಎಂದು ಕುಮಾರಸ್ವಾಮಿ ಹೆಸರು ಹೇಳದೆ ಕೃಷ್ಣ ಹರಿಹಾಯ್ದರು.