ಮಂಡ್ಯ ಜಿಲ್ಲೆಯಲ್ಲಿ ಅಸಮಾಧಾನ ಬಗೆ ಹರಿದಿದೆ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಏ.3- ಮಂಡ್ಯ ಜಿಲ್ಲೆಯ ರಾಜಕಾರಣದಲ್ಲಿ ತಲೆದೋರಿರುವ ಭಿನ್ನಮತವನ್ನು ಸರಿ ಪಡಿಸಲು ನಿನ್ನೆ ಮಧ್ಯ ರಾತ್ರಿವರೆಗೂ ಜಿಲ್ಲಾ ಮುಖಂಡರ ಜೊತೆ ಕಾಂಗ್ರೆಸ್ ನಾಯಕರು ಸಭೆ ನಡೆಸಿ ಮನವೊಲಿಸಲು ಪ್ರಯತ್ನಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಜನ ಪ್ರತಿನಿಧಿಗಳು ಭಾಗವಹಿಸಿದ್ದರು.

ಜೆಡಿಎಸ್‍ನವರು ತಮ್ಮನ್ನು ಪ್ರಚಾರಕ್ಕೆ ಕರೆದಿಲ್ಲ. ಹಾಗಾಗಿ ನಾವು ಮೇಲೆ ಬಿದ್ದು ಹೋಗಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಕಾಂಗ್ರೆಸ್ ನಾಯಕರು ಪಕ್ಷದ ಆದೇಶವನ್ನು ಪಾಲಿಸುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಅವರು, ನಿನ್ನೆ ರಾತ್ರಿ 12.30ರವರೆಗೂ ಮಂಡ್ಯ ಜಿಲ್ಲೆಯ ಮುಖಂಡರ ಜೊತೆ ಸಭೆ ನಡೆಸಲಾಗಿದೆ.ಜಿಲ್ಲೆಯ ಎಲ್ಲಾ ಮುಖಂಡರು ಭಾಗವಹಿಸಿದ್ದರು. ಜಿಲ್ಲೆಯ ಅಸಮಾಧಾನ ಬಗೆ ಹರಿದಿದೆ. ಅಲ್ಲಿನ ಭಿನ್ನಾಭಿಪ್ರಾಯಗಳಿಗೆ ಪರಿಹಾರ ಕಂಡು ಹಿಡಿದಿದ್ದೇವೆ ಎಂದು ಹೇಳಿದರು.

ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡ್ಯ, ಮೈಸೂರು, ತುಮಕೂರು, ಶಿವಮೊಗ್ಗ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಒಟ್ಟಾಗಿ ಪ್ರಚಾರ ಮಾಡುತ್ತಾರೆ. ಆಗ ಎಲ್ಲಾ ಮುಖಂಡರು ಬರಲೇಬೇಕು. ಮೈಸೂರು, ಮಂಡ್ಯ ಸೇರಿ ವಿವಿಧೆಡೆ ಇದ್ದ ಗೊಂದಲ ಬಗೆ ಹರಿದಿದೆ. ಮೈತ್ರಿಯಲ್ಲಿ ಯಾರು ಭಿಕ್ಷೆ ಬೇಡುವ ಪ್ರಶ್ನೆ ಬರುವುದಿಲ್ಲ. ನಾವು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಜೊತೆಯೂ ಚರ್ಚೆ ಮಾಡಿದ್ದೇವೆ ಎಂದು ಹೇಳಿದರು.

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಬಾವುಟ, ಚಿನ್ನೆ ಹಿಡಿದು ಪ್ರಚಾರ ಮಾಡಬಾರದು ಹಾಗೆಯೆ ಸುಮಲತಾ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಲು ಸಾಧ್ಯವಿಲ್ಲ. ಪಕ್ಷದಲ್ಲಿದ್ದು ಸುಮಲತಾ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಬೇಕಿದ್ದರೆ ಪಕ್ಷ ಬಿಟ್ಟು ಹೋಗಿ ಕೆಲಸ ಮಾಡಲಿ.

ಮತ್ತೆ ವಾಪಾಸ್ ಬರುವಂತಿಲ್ಲ.ಕಾಂಗ್ರೆಸ್ ಬಾವುಟ ಬಳಸುತ್ತಿರುವ ಬಗ್ಗೆ ಈಗಾಗಲೇ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದೇವೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ