ಬೆಂಗಳೂರು, ಏ.3- ರಾಜ್ಯದ ಎರಡನೆ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆಯವರೆಗೆ 99 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಲು ನಾಳೆ ಕಡೆದಿನ.
ಏ.23ರಂದು ಮತದಾನ ನಡೆಯುವ ಎರಡನೆ ಹಂತದ ಲೋಕಸಭಾ ಕ್ಷೇತ್ರಗಳಾದ ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬೀದರ್, ಬಳ್ಳಾರಿ, ಕಲಬುರಗಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ, ರಾಯಚೂರು, ಕೊಪ್ಪಳ, ವಿಜಯಪುರ, ಹಾವೇರಿ ಹಾಗೂ ಶಿವಮೊಗ್ಗ ಕ್ಷೇತ್ರಗಳಲ್ಲಿ ನಿನ್ನೆಯವರೆಗೆ 99 ಅಭ್ಯರ್ಥಿಗಳು 139 ನಾಮಪತ್ರ ಸಲ್ಲಿಸಿದ್ದಾರೆ.
95 ಪುರುಷ ಹಾಗೂ ನಾಲ್ವರು ಮಹಿಳಾ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಪರಿಶೀಲನೆ ಏ.5ರಂದು ನಡೆಯಲಿದ್ದು, ನಾಮಪತ್ರ ವಾಪಸ್ ಪಡೆಯಲು ಏ.8ರ ವರೆಗೂ ಕಾಲಾವಕಾಶವಿದೆ.ಅಂದು ಸಂಜೆ ಅಂತಿಮವಾಗಿ ಕಣದಲ್ಲಿ ಉಳಿಯುವ ಅಭ್ಯರ್ಥಿಗಳ ಪಟ್ಟಿಯನ್ನು ಆಯಾ ಕ್ಷೇತ್ರಗಳ ಚುನಾವಣಾಧಿಕಾರಿಗಳು ಪ್ರಕಟಿಸಲಿದ್ದಾರೆ.
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ವಿವಿಧ ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ 241 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಮೊದಲ ಹಂತದಲ್ಲಿ ಏ.18ರಂದು ಮತದಾನ ನಡೆಯಲಿದ್ದು, ಎರಡನೆ ಹಂತಕ್ಕೆ ಏ.23ರಂದು ಮತದಾನ ನಡೆಯಲಿದೆ.ಎರಡೂ ಹಂತಗಳ ಮತ ಎಣಿಕೆ ಮೇ 23ರಂದು ನಡೆದು ಅಂದೇ ಫಲಿತಾಂಶ ಹೊರಬೀಳಲಿದೆ.