ನವದೆಹಲಿ: ಕಾಂಗ್ರೆಸ್ ನ ಕನಿಷ್ಠ ಆದಾಯ ಖಾತ್ರಿ ಭರವಸೆ ಯೋಜನೆ ‘ನ್ಯಾಯ್’ ಕುರಿತ ತಮ್ಮ ಹೇಳಿಕೆ ವೈಯಕ್ತಿಕವಾದದ್ದು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಪ್ರಣಾಳಿಕೆ ಬಿಡುಗಡೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ದೇಶದಲ್ಲಿರುವ ಶೇ.20 ಕಡುಬಡವರ ಬ್ಯಾಂಕ್ ಖಾತೆಗೆ ಮಾಸಿಕ 6 ಸಾವಿರ ರೂ.ನಂತೆ ವಾರ್ಷಿಕ 72 ಸಾವಿರ ರೂ. ಕನಿಷ್ಠ ಆದಾಯದ ಮೊತ್ತವನ್ನು ಸಂದಾಯ ಮಾಡುವ ನ್ಯಾಯ್ ಎಂಬ ಯೋಜನೆಯನ್ನು ಘೋಷಿಸಿದ್ದರು. ಇದು ಬಡತನದ ವಿರುದ್ಧದ ಕಾಂಗ್ರೆಸ್ನ ಸರ್ಜಿಕಲ್ ಸ್ಟ್ರೈಕ್ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್, ಚುನಾವಣೆಯನ್ನು ಗೆಲ್ಲುವ ಸಲುವಾಗಿ ಬಾಯಿಗೆ ಬಂದ ಭರವಸೆ ನೀಡಿ ಮತದಾರರನ್ನು ಓಲೈಸುವ ಕಾಂಗ್ರೆಸ್ ಕಸರತ್ತಿನ ಮುಂದುವರಿದ ಭಾಗ ಎಂದು ಟೀಕಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ಕೋರಿ ರಾಜೀವ್ ಕುಮಾರ್ಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಸ್ಪಷ್ಟನೆ ನೀಡಿರುವ ರಾಜೀವ್ ಕುಮಾರ್, ತಮ್ಮ ಟೀಕೆ ವೈಯಕ್ತಿಕವಾದದ್ದು ಎಂದು ಸ್ಪಷ್ಟಪಡಿಸಿದ್ದಾರೆ.
ನ್ಯಾಯ್ ಕುರಿತ ಟೀಕೆ ನನ್ನ ವೈಯಕ್ತಿಕ ಅಭಿಪ್ರಾಯ. ತಾವೊಬ್ಬ ಆರ್ಥಿಕ ತಜ್ಞನಾಗಿ ಈ ಕುರಿತು ಪ್ರತಿಕ್ರಿಯಿಸಿದ್ದೆ. ಒಂದು ವೇಳೆ ಈ ಯೋಜನೆಯಂತೆ ಜನರಿಗೆ ಹಣ ಕೊಡಲಾರಂಭಿಸಿದರೆ ವಿತ್ತೀಯ ಕೊರತೆ ಶೇ.3.5ರಿಂದ ಶೇ.6ಕ್ಕೆ ಹೆಚ್ಚಳವಾಗುತ್ತದೆ. ಜತೆಗೆ, ಜಾಗತಿಕ ಮೌಲ್ಯಾಂಕನ ಸಂಸ್ಥೆಗಳು ಭಾರತಕ್ಕೆ ಕಳಪೆ ಮೌಲ್ಯಾಂಕನ ನೀಡುತ್ತವೆ. ಇದರಿಂದ ಬಾಹ್ಯ ಸಾಲ ಪಡೆಯಲು ತುಂಬಾ ತೊಂದರೆಯಾಗಬಹುದು ಎಂಬ ಕಾರಣಕ್ಕಾಗಿ ಈ ಹೇಳಿಕೆ ನೀಡಿದ್ದಾಗಿ ತಿಳಿದ್ದಾರೆ.
Niti ayog VC Rajiv Kumar, explain,Election Commission