ಕೇಂದ್ರದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ-ಮಾಜಿ ಪ್ರಧಾನಿ ದೇವೇಗೌಡ

ಹಾಸನ,ಏ.3- ಕೇಂದ್ರದಲ್ಲಿ ಮತ್ತೆ ಸಮ್ಮಿಶ್ರ ಸರ್ಕಾರ ಅಧಿಕಾರ ನಡೆಸುವ ಕಾಲ ದೂರವಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಚಂಗಡಹಳ್ಳಿಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮೇ 23ಕ್ಕೆ ಲೋಕಸಭಾ ಚುನಾವಣಾ ಫಲಿತಾಂಶ ಬರುತ್ತದೆ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಗೌಡರು, ಕಾಂಗ್ರೆಸ್ ಮುಕ್ತ ದೇಶ ಮಾಡುತ್ತೇವೆ ಎಂದು ಹೇಳುತ್ತಾರೆ. ತಾವು ಪ್ರಧಾನಿಯಾಗಿದ್ದಾಗ ಕೋಮು ಶಕ್ತಿಯನ್ನು ಬೆಳೆಯಲು ಬಿಡಲಿಲ್ಲ. ಕಾಶ್ಮೀರಕ್ಕೆ ಅಗತ್ಯ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೆ ಈಗ ಆ ರಾಜ್ಯ ಎಷ್ಟು ಹದಗೆಟ್ಟಿದೆ ನೋಡಬೇಕು ಎಂದರು.

ತಮ್ಮ ಆಡಳಿತಾವಧಿಯಲ್ಲಿ ರೈತರ ಆತ್ಮಹತ್ಯೆ ನಡೆಯಲು ಬಿಟ್ಟಿರಿಲಿಲ್ಲ ಎಂದು ದೇವೇಗೌಡರು ಸಮರ್ಥಿಸಿಕೊಂಡರು.

ಪ್ರಜ್ವಲ್ ರೇವಣ್ಣ ಮಾತನಾಡಿ, ಕಾಂಗ್ರೆಸ್-ಜೆಡಿಎಸ್ ಪಕ್ಷದ ಆಶೀರ್ವಾದ ಪಡೆದು ಚುನಾವಣೆಗೆ ಸ್ಪರ್ಧಿಸಿರುವುದಾಗಿ ಹೇಳಿದರು.

ನಾಲ್ಕು ವರ್ಷ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವರ ಕೊಡುಗೆ ಏನು ಎಂದು ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರನ್ನು ಪ್ರಶ್ನಿಸಿದರು.

ನಿಷ್ಠೆ ಹಾಗೂ ದಕ್ಷತೆಯಿಂದ ಕೆಲಸ ಮಾಡುವ ತಮಗೆ ಆಶೀರ್ವಾದ ಮಾಡಿ ಎಂದು ಪ್ರಜ್ವಲ್ ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ